ತಲಪಾಡಿ:- ಕೋಟೆಕ್ಕಾರು, ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನ ಬಳಿಯ ನಿವಾಸಿ ಧಾರ್ಮಿಕ, ಸಾಮಾಜಿಕ ಮುಂದಾಳು, ಕೋಟೆಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನದ ವ್ಯವಸ್ಥಾಪಕರೂ, ಪಾಕ ಶಾಸ್ತ್ರಜ್ಞರಾಗಿರುವ ನಡುಮನೆ ಸುಧಾಮ ಆಚಾರ್ಯ (63) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ನಿನ್ನೆ ಸಂಜೆ 4.43 ಕ್ಕೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ನಡುಮನೆ ದಿ. ಕೃಷ್ಣಪ್ಪ ಆಚಾರ್ಯ - ದಿ. ಲೀಲಾವತಿ ದಂಪತಿಯ ಪುತ್ರನಾಗಿದ್ದು, ಪತ್ನಿ:- ಅನುಸೂಯ, ಆಪ್ತಬಂಧು:- ಕೇಶವ ಆಚಾರ್ಯ ಬಂಬ್ರಾಣ, ಸಹೋದರ - ಸಹೋದರಿಯರಾದ:- ನಡುಮನೆ ಶಿವರಾಮ ಆಚಾರ್ಯ, ನಡುಮನೆ ಸುಂದರ ಆಚಾರ್ಯ (ಅಧ್ಯಕ್ಷರು:- ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನ, ಕೋಟೆಕ್ಕಾರು.), ನಡುಮನೆ ಜಗದೀಶ್ ಆಚಾರ್ಯ "ಸ್ವಸ್ತಿಕ್ ನಿವಾಸ" ಕೋಟೆಕ್ಕಾರು, ಚಂದ್ರಾವತಿ ಹಾಗೂ ನಡುಮನೆ ಕುಟುಂಬಸ್ಥರು ಮತ್ತು ಅಪಾರ ಬಂಧು - ಮಿತ್ರವರ್ಗವನ್ನ ಅಗಲಿದ್ದಾರೆ.
ಮೃತರು ಈ ಮೊದಲು ಕೋಟೆಕ್ಕಾರ್ ನಲ್ಲಿ "ಸ್ವಸ್ತಿಕ್ ಜ್ಯುವೆಲ್ಲರಿ" ಎಂಬ ನಾಮಾಂಕಿತದಲ್ಲಿ ಚಿನ್ನದ ಕುಸುರಿ ಕೆಲಸ ಮಾಡುತ್ತಿದ್ದರು, ಬಳಿಕ ಅಡುಗೆ ಪಾಕಶಾಸ್ತ್ರಜ್ಞರಾಗಿ ಕಳೆದ 24 ವರುಷಗಳಿಂದ ವಿವಿಧ ಕಡೆಗಳಲ್ಲಿ ವಿವಿಧ ಶುಭ ಸಮಾರಂಭ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಶುಚಿ - ರುಚಿಯಾದ ಅಡುಗೆ ತಯಾರಿಸಿ, ಉಂಡವರ ಮನ ತಣಿಸಿ, ಸರ್ವರ ಪ್ರೀತಿಗೆ ಪಾತ್ರರಾಗಿದ್ದರು. ಅಡುಗೆಯಲ್ಲಿ ಬಾಣಸಿಗರಾಗಿ, ಪಾಕಶಾಸ್ತ್ರಜ್ಞರಾಗಿ ಬಾರಿ ಪ್ರಸಿದ್ಧರಾಗಿದ್ದ ಇವರು ಮಂಜೇಶ್ವರ, ಕೋಟೆಕ್ಕಾರ್, ಆರಿಕ್ಕಾಡಿ, ಮಧೂರು ಶ್ರೀ ಕಾಳಿಕಾಂಬ ಕ್ಷೇತ್ರಗಳ ಬ್ರಹ್ಮಕಲಶೋತ್ಸವ ಸಂಧರ್ಭ ಲಕ್ಷಾಂತರ ಮಂದಿಗೆ ಮೂರು ಹೊತ್ತಿನ ಆಹಾರ ಖ್ಯಾದ ತಯಾರಿಕೆಗೆ ಪ್ರಧಾನ ಉಸ್ತುವಾರಿ ವಹಿಸಿ, ಪಾಕಶಾಸ್ತ್ರಜ್ಞರಾಗಿ ಕಾರ್ಯಕ್ರಮದ ಯಶಸ್ವಿಗೂ ಕಾರಣರಾಗಿದ್ದರು. ಅಲ್ಲದೇ ಕೋಟೆಕ್ಕಾರಿನ ಶ್ರೀ ಕಾಳಿಕಾಂಬ ಕ್ಯಾಟರರ್ಸ್ನ ಮಾಲಕರಾಗಿ, ತಮ್ಮ ಬಳಿ ಬಂದ ಹಲವಾರು ಮಂದಿಗೆ ವಿವಿಧ ನಮೂನೆಯ ರುಚಿಯಾದ ಆಹಾರ ಉತ್ಪನ್ನಗಳ ತಯಾರಿಕೆ ಬಗ್ಗೆ ಮಾಹಿತಿ, ಕಲಿಕೆ ನೀಡಿ, ಸಮಾಜದಲ್ಲಿ ಉತ್ತಮ ಬಾಣಸಿಗಾರನ್ನಾಗಿಸಿ, ಉದ್ಯೋಗದ ಹಾದಿ ನೀಡುವಲ್ಲಿ ಪ್ರಮುಖರಾಗಿದ್ದರು. ಇದೀಗ ಇವರಿಂದ ಕಲಿತ ಅನೇಕ ಮಂದಿ ಬಾಣಸಿಗರು ತಮ್ಮ ತಮ್ಮ ಸ್ವಂತಿಕೆಯಲ್ಲಿ ವಿವಿಧ ಶುಭ ಕಾರ್ಯಕ್ರಮಗಳಿಗೆ, ಇನ್ನಿತರ ಸಮಾರಂಭಗಳಲ್ಲಿ ಆಹಾರ ತಯಾರಿಸಿ ಕೊಡುವಲ್ಲಿ ನಿಪುಣರಾಗಿರುವರು. ಮೃತರು ಧಾರ್ಮಿಕ ಮುಂದಾಳುವಾಗಿದ್ದು, ಕೋಟೆಕ್ಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ವ್ಯವಸ್ಥಾಪಕರಾಗಿ ಕಳೆದ 27 ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಕ್ಷೇತ್ರದ ನಿತ್ಯ ನೈಮಿತ್ತಿಕ ಕಾರ್ಯದ ಉಸ್ತುವಾರಿಯನ್ನ ನೋಡುತ್ತಿದ್ದರು. ಹಾಗೂ ಕ್ಷೇತ್ರದ ಅಂಗ ಸಂಸ್ಥೆಯಾದ ಕೋಟೆಕ್ಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ವಿಶ್ವಕರ್ಮ ಸೇವಾ ಸಂಘದ ಪಧಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಸೇವೆಯನ್ನ ಮನಗಂಡು ಕ್ಷೇತ್ರದ ಉತ್ಸವ ಸಂಧರ್ಭದಲ್ಲಿ ಸೇವಾ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕೋಟೆಕ್ಕಾರು ಶ್ರೀ ಗಜಾನನ ಮಿತ್ರ ಮಂಡಳಿಯ ಸಕ್ರೀಯ ಸದಸ್ಯರಾಗಿದ್ದು, ಹಲವಾರು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದರು.
ಮೃತರು ಅಲ್ಪಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದು, ಕಳೆದೆರಡು ದಿನಗಳ ಹಿಂದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಸಂಜೆ ನಿಧನರಾದರು. ಮೃತದೇಹವನ್ನ ಇಂದು (ತಾ:- 26 - 09 - 2021ನೇ ಆದಿತ್ಯವಾರ) ಬೆಳಗ್ಗೆ 11 ಕ್ಕೆ ಕೋಟೆಕ್ಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನ ಬಳಿಯ ನಿವಾಸಿ ಸಹೋದರ ನಡುಮನೆ ಜಗದೀಶ್ ಆಚಾರ್ಯರ "ಸ್ವಸ್ತಿಕ್ ನಿವಾಸ" ಕ್ಕೆ ತರಲಾಗುವುದು. ಬಳಿಕ ವಿಧಿ ವಿಧಾನಗಳ ಬಳಿಕ ಮಾಡೂರು ಹಿಂದೂ ರುಧ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಕೋಟೆಕ್ಕಾರು ಶ್ರೀ ಕಾಳಿಕಾಂಬ ದೇವಸ್ಥಾನದ ವ್ಯವಸ್ಥಾಪಕರೂ, ಪಾಕ ಶಾಸ್ತ್ರಜ್ಞ ಶ್ರೀ ಸುಧಾಮ ಆಚಾರ್ಯರ ಅಕಾಲ ನಿಧನಕ್ಕೆ ಕೋಟೆಕ್ಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನದ ಶ್ರೀ ವಿಶ್ವಕರ್ಮ ಬ್ರಾಹ್ಮಣರ ಸಂಘ, ಶ್ರೀ ವಿಶ್ವಕರ್ಮ ಸೇವಾ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ, ಸ್ನೇಹ ಮಿಲನ ಕೋಟೆಕ್ಕಾರು, ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ, ಆರಿಕ್ಕಾಡಿ ಕಾರ್ಲೆ ಶ್ರೀ ಕಾಳಿಕಾಂಬ ದೇವಸ್ಥಾನ, ಮಧೂರು ಶ್ರೀ ಕಾಳಿಕಾಂಬ ಮಠದ ಆಡಳಿತ ಸಮಿತಿ ಗಾಢವಾದ ಸಂತಾಪ ಸೂಚಿಸಿದ್ದಾರೆ.
ವರದಿ : ರತನ್ ಕುಮಾರ್ ಹೊಸಂಗಡಿ
