ಮಂಜೇಶ್ವರ : ಶತಮಾನದ ಮಹಿಳೆ, ದೇಶದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಧೀರೋದಾತ್ತ ಬದುಕು ಮತ್ತು ಆಡಳಿತದ ಪ್ರತಿಫಲವನ್ನು ದೇಶದ ಸಕಲ ಜನತೆಯೂ ಅನುಭವಿಸಿದ್ದಾರೆ.
ಬಡವರ ಪಾಲಿಗೆ ಮುಚ್ಚಿದ್ದ ಬ್ಯಾಂಕ್ ಗಳನ್ನು ರಾಷ್ಟ್ರೀಕರಣದ ಮೂಲಕ ಬಡವರಿಗೆ ತೆರೆದು ಕೊಟ್ಟ ಇಂದಿರಾಜಿಯವರು ರಾಜಧನ ರದ್ದತಿ, ಕ್ರಾಂತಿಕಾರಿ ಭೂಮಸೂದೆ,ಬಾಂಗ್ಲಾ ವಿಮೋಚನೆ,ಇಪ್ಪತ್ತಂಶಗಳ ಬಡತನ ಲಘೂಕರಣ ಯೋಜನೆಗಳು, ಸಾಮಾಜಿಕ ಸುರಕ್ಷಾ ಪಿಂಚಣಿಗಳು ಹಾಗೂ ಹಲವಾರು ಜನಪ್ರಿಯ ಯೋಜನೆಗಳ ಮುಖಾಂತರ ದೇಶವನ್ನು ಜಗತ್ತಿನ ಇತರ ರಾಷ್ಟ್ರಗಳ ಮುಂದೆ ಸ್ವಾವಲಂಬಿ,
ಸ್ವಾಭಿಮಾನಿ ರಾಷ್ಟ್ರವನ್ನಾಗಿ ರೂಪಿಸಿದ್ದರು.
ಭಾರತವನ್ನು ಜಗತ್ತಿನ ಸೂಪರ್ ಪವರ್ ದೇಶಗಳ ಸಾಲಿಗೆ ಸೇರಿಸಿದ ಇಂದಿರಾಜಿಯವರು ಭಾರತೀಯರಿಗೆಲ್ಲರಿಗೂ ಅಕ್ಷರಶಃ ಪ್ರಾತಃಸ್ಮರಣೀಯರಾಗಿದ್ದಾರೆ. ಶ್ರೀಮತಿ ಇಂದಿರಾಗಾಂಧಿ ಸಹಿತ ದೇಶದ ಸ್ವಾತಂತ್ರ್ಯ ಮತ್ತು ಏಕತೆಗಾಗಿ ಪ್ರಾಣತೆತ್ತ ಮಹನೀಯರನ್ನು ಹೊಸ ತಲೆಮಾರಿನ ಜನತೆಯ ಮುಂದೆ ಅವಹೇಳನ ನಡೆಸಿ, ಧರ್ಮ, ದೇವರುಗಳ ಉನ್ಮಾದ ಸೃಷ್ಟಿಸಿ ದುರಾಡಳಿತ ನಡೆಸುವುದೇ ಈಗಿನ ಬಿಜೆಪಿ ನೇತೃತ್ವದ ಸರಕಾರದ ಕಾಯಕವಾಗಿದೆ.
ಸಾರ್ವಜನಿಕ ವಲಯದ ಸಕಲ ಕಂಪನಿ ಮತ್ತು ಸಂಸ್ಥೆಗಳನ್ನು ಕಾರ್ಪೊರೇಟ್ ಕುಬೇರರ ಪಾದಗಳಿಗೆ ಸಮರ್ಪಿಸಿ, ಬಡ ಕೂಲಿ,ರೈತಾಪಿ ವರ್ಗದ ಜನರ ಮೇಲೆ ಬೆಲೆಯೇರಿಕೆಯ ಹೊಡೆತ ನೀಡಿ ವಿಘ್ನ ಸಂತೋಷ ಅನುಭವಿಸುವ ಮೋದಿ ನೇತೃತ್ವದ ಸರಕಾರದಿಂದ ಒಳಿತನ್ನು ನಿರೀಕ್ಷಿಸುವುದು ಮೌಢ್ಯವಾಗಿದೆ. ಒಂದೇ ದೇಶದ ಜನತೆಯನ್ನು ಪರಸ್ಪರ ಕಚ್ಚಾಡಿಸಿ ಹಲವಾರು ವರ್ಷ ಅಧಿಕಾರದ ಕುರ್ಚಿಯಲ್ಲಿ ಭದ್ರವಾಗಿ ಕುಳಿತು ಕೊಳ್ಳಬಹುದೆಂಬ ಇವರ ಕನಸು ಎಂದಿಗೂ ನನಸಾಗದು ಎಂದು ಕೆಪಿಸಿಸಿ ಕಾರ್ಯದರ್ಶಿ ಶ್ರೀ ಅಡ್ವಕೇಟ್ ಬಿ.ಸುಬ್ಬಯ್ಯ ರೈ ಹೇಳಿದ್ದಾರೆ.
ದೇಶದ ಏಕತೆಗಾಗಿ ಪ್ರಾಣತ್ಯಾಗ ಮಾಡಿದ ಇಂದಿರಾಜಿಯವರ ಪುಣ್ಯತಿಥಿಯ ದಿನದಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾದ ಇಂದಿರಾಗಾಂಧಿ ಸ್ಮೃತಿ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು.
ಹೊಸಂಗಡಿಯಿಂದ ಉಪ್ಪಳದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಶ್ರೀ ದಿವಾಕರ್ ಎಸ್.ಜೆ ಸ್ವಾಗತಿಸಿ, ಶ್ರೀ ಮುಹಮ್ಮದ್ ಸೀಗಂಡಡಿ ವಂದಿಸಿದರು. ನೇತಾರರಾದ ಉಮ್ಮರ್ ಬೊರ್ಕಳ, ಪಿ ಸೋಮಪ್ಪ, ಜಿಲ್ಲಾಪಂಚಾಯತ್ ಸದಸ್ಯೆ ಕಮಲಾಕ್ಷಿ, ಹರ್ಷಾದ್ ವೊರ್ಕಾಡಿ, ಪಿ ಎ ಕಾದರ್ ಹಾಜಿ, ಉಮ್ಮರ್ ಶಾಫಿ, ವಸಂತ್ ರಾಜ್ ಶೆಟ್ಟಿ, ಸಂಕಬೈಲ್ ಸತೀಶ್ ಅಡಪ್ಪ, ಟಿ ಪ್ರಭಾಕರ್ ನಾಯ್ಕ್, ಬಾಬು ಬಂದ್ಯೋಡ್, ಬರ್ನಾಡ್ ಡಿ ಅಲ್ಮೇಡ, ಖಲೀಲ್ ಬಜಾಲ್, ನಾಗೇಶ್ ಮಂಜೇಶ್ವರ್, ಜಗದೀಶ್ ಮೂಡಂಬಯಲ್, ಆರಿಫ್ ಮಚಂಪಾಡಿ, ಮಮತಾ ದಿವಾಕರ್, ಸೀತಾ ಡಿ, ಶಾಂತಾ ಅರ್ ನಾಯ್ಕ್, ಫ್ರಾನ್ಸಿಸ್ ಡಿ ಸೋಜಾ, ಮೊಹಮ್ಮದ್ ಬೆಜ್ಜ, ಚಂದ್ರ ಶೇಖರ್ ಶೆಟ್ಟಿ ಬೆಜ್ಜ, ಸದಾಶಿವ ಕೆ, ಹಮೀದ್ ಕಣಿಯೂರ್, ಕಾದರ್ ಸಿ ಎಮ್ ನಗರ್, ಕೃಷ್ಣನ್ ಅಡ್ಕತೊಟ್ಟಿ, ಮೊಹಮ್ಮದ್ ಮಜಾಲ್, ಇಬ್ರಾಹಿಂ ಕುಂತೂರ್, ಓಂ ಕೃಷ್ಣ, ಗುರುವಪ್ಪ ಮಂಜೇಶ್ವರ, ಯಾಕೂಬ್ ಕೋಡಿ, ಮಾಲಿಂಗ, ಝಕರಿಯ ಶಾಲಿಮಾರ್, ಮೂಸ ಧರ್ಮನಗರ್, ಆಸೀಸ್ ಕಲ್ಲೂರು, ನವೀನ್ ರೈ ಉಪ್ಪಳ, ಯೋಗೀಶ್ ಉದ್ಯಾವರ, ಪ್ರದೀಪ್ ಶೆಟ್ಟಿ ಮುಂತಾದವರು ಜಾಥಾದಲ್ಲಿ ಬಾಗವಹಿಸಿದರು.
ಉಪ್ಪಳದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.
