ನವರಾತ್ರಿಯ ಆರನೇಯ ದಿನ :-
"ಕಾತ್ಯಾಯನಿ ದೇವಿಯ ಹಿನ್ನಲೆ, ಅವಳ ವೈಶಿಷ್ಟ್ಯತೆ, ಪೌರಾಣಿಕ ಕಥೆ ಮತ್ತು ಆಧ್ಯಾತ್ಮಿಕತೆಯಲ್ಲಿ ಅವಳ ಮಹತ್ವ :-"
ನವರಾತ್ರಿಯ ಆರನೆಯ ದಿನವನ್ನು ಅಂದರೆ, ಷಷ್ಠಿಯ ದಿನದಂದು ದುರ್ಗಾ ಮಾತೆಯನ್ನು ಅವಳ ಆರನೆಯ ಅವತಾರವಾದ ಕಾತ್ಯಾಯಿನಿ ದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ತ್ರಿಮೂರ್ತಿಗಳ ಅಂಶವು ಈ ಕಾತ್ಯಾಯಿನಿ ದೇವಿಯಲ್ಲಿ ಅಡಕವಾಗಿರುವುದು. ಕಾತ್ಯಾಯಿನಿ ಎಂದರೆ, ಪರೋಪಕಾರದ ಪ್ರತಿರೂಪ ಎಂದು ಬಣ್ಣಿಸಲಾಗುತ್ತದೆ. ಇವಳು ಭವ್ಯ ಸ್ವರೂಪದವಳಾಗಿದ್ದು,ಬಂಗಾರದಂತೆ ಹೊಳೆಯುವಳು. ಇವಳು ಸಿಂಹದ ಮೇಲೆ ಕುಳಿತು ಹತ್ತು ಆಯುಧಗಳನ್ನು ಹಿಡಿದಿರುವಳು. ಕಾತ್ಯಾಯಿನಿ ದೇವಿಗೆ ಒಟ್ಟು ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈಯು ಅಭಯ ಮುದ್ರೆಯಲ್ಲಿದ್ದು, ಬಲಗಡೆಯ ಕೆಳಗಿನ ಕೈಯು ವರ ಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದ್ದು, ಎಡಗಡೆಯ ಕೆಳಗಿನ ಕೈಯಲ್ಲಿ ಕಮಲವನ್ನು ಹಿಡಿದಿರುವಳು. ಇವಳು ದುಷ್ಟರನ್ನು ಸಂಹರಿಸಿ, ಶಿಷ್ಟರ ಉದ್ಧಾರ ಮಾಡುವ ಶಕ್ತಿದೇವತೆಯಾಗಿರುವಳು. ಇವಳನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮ ದುಷ್ಟ ಶಕ್ತಿಗಳು ನಾಶವಾಗುತ್ತದೆ ಎಂಬ ನಂಬಿಕೆಯೂ ಇದೆ. ಈ ದಿನವನ್ನು ಮಹಾಶಕ್ತಿ ಎಂದು ಪರಿಗಣಿಸಲಾಗುತ್ತದೆ. ಕಾತ್ಯಾಯಿನಿ ದೇವಿಯನ್ನು ಜ್ಞಾನ ಮತ್ತು ವಿವೇಕದ ದೇವತೆಯೆಂದು ಕರೆಯಲಾಗುತ್ತದೆ. ಈಕೆಯನ್ನು "ಮಹಿಷಾಸುರ ಮರ್ದಿನಿ" ಅಥವಾ "ಸುಜನ ರಕ್ಷಕಿ" ಎಂದು ಬಣ್ಣಿಸಲಾಗುತ್ತದೆ. ಇವಳು ಮೂರು ಕಣ್ಣು ಮತ್ತು ಹಣೆಯ ಮೇಲೆ ಅರ್ಧಚಂದ್ರಾಕೃತಿಯನ್ನು ಹೊಂದಿರುವಳು. ಇವಳು ಗುರು ಗ್ರಹದ ಅಧಿದೇವತೆಯೂ ಆಗಿರುವಳು. ಇವಳ ಆರಾಧನೆಯಲ್ಲಿ ಕೆಂಪು ಬಣ್ಣದ ಹೂವುಗಳನ್ನು ಬಳಸುವುದರಿಂದ ಇವಳಿಗೆ ಅತೀವ ಸಂತೋಷವನ್ನು ನೀಡುತ್ತದೆ.
ಕಾತ್ಯಾಯಿನಿ ದೇವಿಯ ಪೌರಾಣಿಕ ಕಥೆ :-
ಕಾತ್ಯಾಯಿನಿ ದೇವಿಯನ್ನು ಶತ್ರುಗಳ ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆಯಾಗಿದ್ದು, ಈಕೆಯು ಮಹಿಷಾಸುರನನ್ನು ಕೊಲ್ಲುವುದರ ಜೊತೆಗೆ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಲ್ಲುವಳು. ಅಷ್ಟೇ ಅಲ್ಲ, ರಾಕ್ಷಸರು ತಮ್ಮ ಸೆರೆಯಲ್ಲಿಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಪರಾಕ್ರಮಶಾಲಿಯ ಮೂಲಕ ಬಿಡುಗಡೆ ಹೊಂದಿದವು.
ಈಕೆಯ ಕಥೆ ಹೀಗಿದೆ.
ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿಯು ಮಹರ್ಷಿ ಕಾತ್ಯಾಯನರ ಆಶ್ರಮದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು "ಕಾತ್ಯಾಯನಿ" ಎಂದು ಕರೆಯಲಾಗುತ್ತದೆ. ದೇವಿಯು ಜನಿಸಲು ಮುನ್ನ ಮಹಿಷಾಸುರನೆಂಬ ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ, ಅವಾಂತರ ಸೃಷ್ಟಿಸಿದರು. ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು.
ಇದರ ನಂತರ ಕಾತ್ಯಾಯನ ಋಷಿ ತಾಯಿಯನ್ನು ಮೂರು ದಿನಗಳ ಕಾಲ ಪೂಜಿಸಿದರು. ಇದರ ನಂತರ, ದಶಮಿಯ ದಿನದಂದು, ಮಹಿಷಾಸುರನನ್ನು ತಾಯಿಯು ಕೊಂದಳು. ನಂತರ ಶುಂಭ ಮತ್ತು ನಿಶುಂಭರೆಂಬ ರಕ್ಕಸರು ಸ್ವರ್ಗದ ಮೇಲೆ ದಾಳಿ ನಡೆಸಿ ದೇವತೆಗಳ ನಿದ್ದೆಗೆಡಿಸುತ್ತಿದ್ದದ್ದು ಮಾತ್ರವಲ್ಲ, ಇವರು ಇಂದ್ರನ ಸಿಂಹಾಸನವನ್ನು ಸಹ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲ ನವಗ್ರಹಗಳನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ರಾಕ್ಷಸರು ಬೆಂಕಿ ಮತ್ತು ಗಾಳಿಯ ಶಕ್ತಿಯನ್ನು ಕೂಡ ವಶಪಡಿಸಿಕೊಂಡರು. ಈ ಎಲ್ಲಾ ಬೆಳವಣಿಗೆಯಿಂದ ನೊಂದ ಎಲ್ಲಾ ದೇವತೆಗಳು ದೇವಿಯಿದ್ದ ಆಶ್ರಯಕ್ಕೆ ಹೋದರು ಮತ್ತು ಅಸುರರ ದೌರ್ಜನ್ಯದಿಂದ ನಮ್ಮನ್ನು ರಕ್ಷಿಸುವಂತೆಯೂ ಮತ್ತು ರಾಕ್ಷಸರ ಬಂಧನದಲ್ಲಿರುವ ನವಗ್ರಹಗಳನ್ನು ಬಂಧಮುಕ್ತಗೊಳಿಸುವಂತೆ ಪ್ರಾರ್ಥಿಸಿದರು. ತಾಯಿಯು ದೇವತೆಗಳ ಕೋರಿಕೆಯನ್ನು ಮನ್ನಿಸಿ ನಂತರ ತನ್ನೆಲ್ಲಾ ಆಯುಧಗಳಿಂದ ಈ ಎಲ್ಲಾ ಅಸುರರನ್ನು ಕೊಂದು ಎಲ್ಲರನ್ನೂ ಅವರ ಭಯದಿಂದ ಮುಕ್ತಗೊಳಿಸಿದರು.
"ಕಾತ್ಯಾಯಿನಿ ದೇವಿಯ ವೈಶಿಷ್ಟ್ಯತೆ :-"
"ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’" (ಕಾತ್ಯಾಯನನ ಮಗಳು ಕಾತ್ಯಾಯನಿ) "ಅಯನ" ಎಂದರೆ "ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ".
ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನ ಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು.
ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು.
ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿ ಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು.
ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು. ಆದುದರಿಂದ ಅವಳು "ಕಾತ್ಯಾಯನಿ" ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು.
ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನ ಲಹರಿಗಳನ್ನು ಯೋಗ್ಯ ಸ್ಪಂದನ ಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.
"ಕಾತ್ಯಾಯಿನಿ ದೇವಿಯ ಆರಾಧನೆಯ ಮಹತ್ವ :-"
ಕಾತ್ಯಾಯಿನಿ ದೇವಿಯ ಆರಾಧನೆಯು ನಮ್ಮ ಚಿಂತನೆಗಳಲ್ಲಿ ಕಾಮ, ಅರ್ಥ, ಧರ್ಮ ಮತ್ತು ಮೋಕ್ಷದ ಒಳಸಾರದ ಮಹತ್ವವನ್ನು ಅರಿಯುವಂತೆ ಮಾಡುವಳು.
ಇವಳ ಆರಾಧನೆಯಿಂದ ದೈವಿಕ ಚಿಂತನೆಗಳು ಹೆಚ್ಚಾಗಿ ನಮ್ಮ ಮನಸ್ಸಿನೊಳಗಿನ ವ್ಯಾಕುಲತೆಗೆ ಪರಿಹಾರವನ್ನು ನೀಡುವಳು.
ಇವಳ ಆರಾಧನೆಯು ನಮ್ಮ ಜನ್ಮ ಜನ್ಮಾಂತರದ ಹಲವು ಪಾಪಗಳಿಗೆ ಮುಕ್ತಿಯನ್ನು ನೀಡುವಳು.
ಇವಳ ಆರಾಧನೆಯಿಂದ ನಮ್ಮ ಬುದ್ಧಿಶಕ್ತಿ ಸಾಮರ್ಥ್ಯ ಅಧಿಕವಾಗಿ ಸಮಾಜದಲ್ಲಿ ಉನ್ನತವಾದ ಪದವಿ ಸ್ಥಾನಮಾನ ನೀಡುವಳು.
ಇವಳ ಆರಾಧನೆಯಿಂದ ನಮ್ಮ ಮನಸ್ಸಿನಲ್ಲಿ ಆಹ್ಲಾದಕರವಾದ ವಾತಾವರಣವು ಸೃಷ್ಟಿಯಾಗಿ ಸುಖ, ನೆಮ್ಮದಿ ಮತ್ತು ಶಾಂತಿ ಹಾಗೂ ಸೌಭಾಗ್ಯವನ್ನು ಕರುಣಿಸುವಳು.
ಕಾತ್ಯಾಯಿನಿ ದೇವಿಯ ಆರಾಧನೆಯಿಂದ ಅದರ ಫಲವಾಗಿ ನಮ್ಮ ಏಳಿಗೆಯನ್ನು ಸಹಿಸದ ದುಷ್ಟ ಶಕ್ತಿಗಳನ್ನು ದ್ವಂಸ ಮಾಡುವಳು.
ಇವಳ ಆರಾಧನೆಯಿಂದ ಭಯದ ವಾತಾವರಣ ನಿರ್ಮೂಲನೆಗೊಂಡು ನಿಧಾನವಾಗಿ ಆಧ್ಯಾತ್ಮಿಕ ಚಿಂತನೆಗಳು ಮತ್ತು ಸಕಾರಾತ್ಮಕವಾದ ಶಕ್ತಿ ಮನದಲ್ಲಿ ಬೇರೂರಲು ಆರಂಭವಾಗುತ್ತದೆ.
ಇವಳನ್ನು ಭಕ್ತಿಯಿಂದ ಆರಾಧನೆ ಮಾಡಲ್ಪಟ್ಟರೆ ನಮ್ಮ ಬದುಕನ್ನು ಸಮೃದ್ಧಿಗೊಳಿಸಿ ಸಂಪತ್ತನ್ನು ನೀಡುವುದರ ಜೊತೆಗೆ ಉತ್ತಮ ಜ್ಞಾನ ಹಾಗೂ ಸಂಸ್ಕಾರವನ್ನು ಒದಗಿಸುವಳು.
ಕಾತ್ಯಾಯಿನಿ ದೇವಿಯ ಆರಾಧನೆಯು ನಮ್ಮ ಬದುಕಿನಲ್ಲಿ ಶಾಂತಿಯುತವಾದ ವಾತಾವರಣಗಳೊಂದಿಗೆ ಸೌಹಾರ್ದತೆ ಬೆಳೆಯಲು ಕಾರಣಕರ್ತಳಾಗುವಳು.
ಲೇಖನ ಮತ್ತು ಸಂಗ್ರಹ : ಶ್ರೀ ಬೆಂಗಳೂರು
