ಮಂಜೇಶ್ವರ:- ಮಂಗಳೂರು ಮಂಗಳಾ ಈಜು ಕ್ಲಬ್ಬಿನ ಸದಸ್ಯ ಮಂಜೇಶ್ವರ ಹೊಸಬೆಟ್ಟು, ಜಮ್ಮದ ಮನೆ ನಿವಾಸಿ ಮಾ| ಚಿಂತನ್ ಶೆಟ್ಟಿ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಕರ್ನಾಟಕ ಈಜು ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನ ಬಸವನಗುಡಿ ಈಜು ಕೊಳದಲ್ಲಿ ನಡೆದ ಎನ್.ಆರ್.ಜೆ ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಅಕ್ವೇಟಿಕ್ ಚಾಂಪಿಯನ್ ಶಿಫ್ 2021 - 22 ರಲ್ಲಿ ಮಂಗಳೂರು ನಗರದ ಮಂಗಳಾ ಈಜು ಕ್ಲಬ್ ಸದಸ್ಯರಾದ ಮಂಜೇಶ್ವರ ಜಮ್ಮದ ಮನೆ ನಿವಾಸಿ ಮಾ| ಚಿಂತನ್ ಎಸ್. ಶೆಟ್ಟಿ ಯವರು 50 ಮೀ. ಫ್ರಿಸ್ಟೈಲ್ ಮತ್ತು 50. ಮೀ ಬಟರ್ ಪ್ಲೈ ಈಜು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಹಾಗೂ 100 ಮೀ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಇದೇ ತಿಂಗಳ 19 ರಿಂದ 23 ರ ವರೆಗೆ ನಡೆಯುವ ಭಾರತೀಯ ಈಜು ಪ್ರಾಧಿಕಾರದ (ಎಸ್.ಎಫ್.ಐ) ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಅಲ್ಲದೇ 4×100 ಮೀ ಫ್ರೀಸ್ಟೈಲ್ ರಿಲೇ ಹಾಗೂ 4×100 ಮೀ. ಮಿಡ್ಲೆ ರಿಲೆಯಲ್ಲಿ ಕರ್ನಾಟಕ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ. ಈತನಿಗೆ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ನ ತರಬೇತುದಾರರಾದ ಶ್ರೀ.ಎಂ. ಶಿವಾನಂದ ಗಟ್ಟಿ ಇವರ ಮಾರ್ಗದರ್ಶನದಲ್ಲಿ ತರಬೇತುದಾರರಾದ ಶಿಶಿರ್ ಎಸ್. ಗಟ್ಟಿ, ಶುಭಂ, ರಾಜೇಶ್ ಬೆಂಗ್ರೆ, ಕೀರ್ತನ್ ಎಸ್. ಶೆಟ್ಟಿ, ನಾಗರಾಜ್ ಖಾರ್ವಿ, ಇವರಿಂದ ನಗರದ ಕಾರ್ಪೊರೇಷನ್ ಈಜು ಕೊಳದಲ್ಲಿ ತರಬೇತಿ ನೀಡುತ್ತಿದ್ದಾರೆ.
ಮಾ. ಚಿಂತನ್ ಶೆಟ್ಟಿಯವರು ಮೂಲತಃ ಮಂಜೇಶ್ವರದ ಹೊಸಬೆಟ್ಟು ಬಳಿಯ ಜಮ್ಮದಮನೆ ನಿವಾಸಿಯಾಗಿದ್ದು, ಇದೀಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಮಂಗಳೂರು ಕ್ರೈಮ್ ಬ್ರಾಂಚ್ ನ ಎ.ಎಸ್.ಐ ಯಾಗಿರುವ ಶ್ರೀ ಶಶಿಧರ್ ಶೆಟ್ಟಿ - ಹರಿನಾಕ್ಷಿ ಎಸ್ ಶೆಟ್ಟಿ ದಂಪತಿಗಳ ಪುತ್ರನಾಗಿದ್ದು, ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಶ್ರೀ ರಾಮಕೃಷ್ಣ ಹೈಸ್ಕೂಲ್ ನ 8 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಸಹೋದರರಾದ ಚೇತನ್ ಶೆಟ್ಟಿ ಹಾಗೂ ಕೀರ್ತನ್ ಶೆಟ್ಟಿ ಯವರ ಮತ್ತು ಹೆತ್ತವರ ಪ್ರೋತ್ಸಾಹದೊಂದಿಗೆ ಈಜು ಕಲಿಕೆಯಲ್ಲಿ ತೊಡಗಿ ಸಾಧನೆ ಮಾಡಿ ಇದೀಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತನ ಈ ಸಾಧನೆಗೆ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ, ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಪರಮಪೂಜ್ಯನೀಯ ಶ್ರೀ ಶ್ರೀ ಮಾತಾನಂದಮಯಿ ಯವರು ಮತ್ತು ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಮಿತಿಯ ಮಂಜೇಶ್ವರ ವಲಯ ಸಮಿತಿ ಅಭಿನಂದನೆ ಸಲ್ಲಿಸಿದ್ದಾರೆ.
ಚಿತ್ರ ಮತ್ತು ವರದಿ : ರತನ್ ಕುಮಾರ್ ಹೊಸಂಗಡಿ
