ಕುಂದಾಪುರದಿಂದ ಸುಮಾರು ೩೫ ಕಿ.ಮೀ. ಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಳವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ. ದೇವಳದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ.
#ಸ್ಥಳ ಪುರಾಣ
ಕ್ಷೇತ್ರಕ್ಕೆ ಕಮಲಶಿಲೆ ಎಂದು ಹೆಸರು ಬಂದ ಬಗ್ಗೆ ಹಲವು ಕಥೆಗಳಿವೆ.
ಸ್ಕಂಧಪುರಾಣದ ಸಹ್ಯಾದ್ರಿ ಕಾಂಡದ ಕಥೆ ಸಂಪಾದಿಸಿ
ಸ್ಕಂಧ ಪುರಾಣದ ಸಹ್ಯಾದ್ರಿ ಕಾಂಡದ ಪ್ರಕಾರ ಕೈಲಾಸ ಪರ್ವತದಲ್ಲಿ ಪಿಂಗಳ ಎಂಬ ಸುಂದರ ನೃತ್ಯಗಾರ್ತಿಯಿದ್ದಳಂತೆ. ಒಮ್ಮೆ ಅವಳು ತನ್ನ ಅಹಂಕಾರದಿಂದ ತಾನು ನರ್ತಿಸಲೊಲ್ಲೆ ಎಂದಾಗ ಪಾರ್ವತಿ ಭೂಲೋಕದಲ್ಲಿ ಕುರೂಪಿಯಾದ ಹೆಣ್ಣಾಗಿ ಹುಟ್ಟು ಎಂದು ಶಪಿಸುತ್ತಾಳಂತೆ. ತನ್ನ ತಪ್ಪಿನ ಅರಿವಾದ ಪಿಂಗಳೆಯು ಕ್ಷಮೆಯಾಚಿಸಲು ಕರಟಾಸುರನ ದುಷ್ಕೃತ್ಯಗಳಿಂದ ಪರಿತಪಿಸುತ್ತಿರೋ ಭೂಲೋಕವಾಸಿಗಳ ಉದ್ದಾರಕ್ಕೆ ತಾನೇ ಅವತರಿಸುತ್ತೇನೆ. ಸಹ್ಯಾದ್ರಿಯ ತಪ್ಪಲಿನಲ್ಲಿರುವ ಋಕ್ಷ್ವಮುನಿಯ ಆಶ್ರಮದ ಬಳಿಯಲ್ಲಿ ಕಮಲಶಿಲೆಯ ರೂಪದ ಲಿಂಗದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಳಂತೆ. ಪಿಂಗಳೆ ಭೂಮಿಗೆ ಅವತರಿಸಿದ್ದು ಕುಬ್ಜೆಯೆಂಬ ಕುರೂಪಿಯಾಗಿ. ಕುಬ್ಜೆ ತನ್ನ ಈ ಜನ್ಮದ ಮೋಕ್ಷಕ್ಕಾಗಿ ಈ ಕ್ಷೇತ್ರದಲ್ಲಿರೋ ಸುಪಾರ್ಶ್ವ ಗುಹೆಯಲ್ಲಿ ತಪಸ್ಸು ಮಾಡತೊಡಗುತ್ತಾಳೆ. ಈ ತಪಸ್ಸಿನಿಂದ ಪ್ರಸನ್ನಳಾಗೋ ಪಾರ್ವತಿ ಸುಪಾರ್ಶ್ವಗುಹೆಯಲ್ಲಿ ಹುಟ್ಟೋ ನಾಗತೀರ್ಥ ಮತ್ತು ಈಗಿನ ಕುಬ್ಜಾನದಿಯ ಸಂಗಮಸ್ಥಳದಲ್ಲಿ ಕಮಲಶಿಲೆಯ ಲಿಂಗವಾಗಿ (ಈಗಿನ ದುರ್ಗಾಪರಮೇಶ್ವರಿ ದೇವಸ್ಥಾನವಿರುವ ಕಡೆ) ಪ್ರತ್ಯಕ್ಷಳಾಗುತ್ತಾಳೆ. ದೇವಿಯು ಶ್ರೀಕೃಷ್ಣನ ಸ್ಪರ್ಷದಿಂದ ನಿನ್ನ ಪಾಪಪರಿಹಾರವಾಗುವುದೆಂಬ ವಿಧಿಲಿಖಿತವಿರೋದ್ರಿಂದ ನೀನು ಮಥುರೆಗೆ ತೆರಳು ಎಂದು ಕುಬ್ಜೆಗೆ ತಿಳಿಸುತ್ತಾಳೆ. ಸಹ್ಯಾದ್ರಿಯ ತಪ್ಪಲಲ್ಲಿ ಹುಟ್ಟಿ ಪಶ್ಚಿಮದ ಕಡಲೆಡೆಗೆ ಸಾಗೋ ನದಿ ಕುಬ್ಜೆಯ ನೆನಪಲ್ಲಿ ಕುಬ್ಜಾ ನದಿಯೆಂದೇ ಹೆಸರು ಪಡೆಯುತ್ತದೆ ಎಂದು ತಿಳಿಸುತ್ತಾಳೆ. ಈ ಕಥೆ ಶ್ರೀಕೃಷ್ಣನ ಸ್ಪರ್ಷದಿಂದ ಗೂನುಬೆನ್ನಿನ ಅಜ್ಜಿಯೊಬ್ಬಳು ಶಾಪಪರಿಹಾರಗೊಂಡು ತನ್ನ ಮೊದಲ ರೂಪ ಪಡೆಯೋ ಕಥೆಯನ್ನು ಭಾಗವತದ ಕಥೆಯೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಕಾಣಬಹುದು.
#ಬ್ರಹ್ಮ ಲಿಂಗೇಶ್ವರನ ಕಥೆ
ಕಮಲ ಶಿಲೆಯ ಲಿಂಗ ಪ್ರಪಂಚದ ಸೃಷ್ಟಿಯ ಸಂದರ್ಭದಲ್ಲೇ ಉತ್ಪತ್ತಿಯಾಯಿತೆಂದೂ , ಇದು ಆದಿ ಬ್ರಹ್ಮನ ಸ್ವರೂಪವೆಂದೂ ಬ್ರಹ್ಮ ಲಿಂಗೇಶ್ವರನೆಂದೂ ಜನ ಪೂಜಿಸುತ್ತಿದ್ದಂತೆ. ನಂತರದಲ್ಲಿ ಇದು ಶ್ರೀ ದುರ್ಗಾಪರಮೇಶ್ವರಿಯೆಂದು ಬದಲಾಯಿತೆಂದೂ ಜನ ತಿಳಿಸುತ್ತಾರೆ.
ಮಾಹಿತಿ ಸಂಗ್ರಹ, ಲೇಖನ : ಶ್ರೀ ಬೆಂಗಳೂರು
