ಮಂಗಳೂರು : ನವರಾತ್ರಿಯ ಸಂದರ್ಭದಲ್ಲಿ ವಿಶ್ವದ ಗಮನ ಸೆಳೆದಿರುವ `ಮಂಗಳೂರು ದಸರಾ'ಕ್ಕೆ ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಮಂಗಳಾದೇವಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಚಾಲನೆ ಇಂದು ದೊರಕಿತು.
ಕುದ್ರೋಳಿ ಕ್ಷೇತ್ರದ ವತಿಯಿಂದ ನಡೆಯುವ ನವರಾತ್ರಿ ಉತ್ಸವ ಮಂಗಳೂರು ದಸರಾ ಎಂದೇ ಖ್ಯಾತಿಯನ್ನು ಪಡೆದಿದ್ದು, ಕೊರೋನ ನಿಯಂತ್ರಣದ ನಿರ್ಬಂಧಗಳ ಜತೆಯಲ್ಲೇ ಸಂಭ್ರಮದ ಆಚರಣೆಗೆ ಕ್ಷೇತ್ರದಲ್ಲಿ ಚಾಲನೆ ದೊರಕಿತು.
ಕ್ಷೇತ್ರದ ದಸರಾ ದರ್ಬಾರು ಮಂಟಪದಲ್ಲಿ ನವದುರ್ಗೆಯರು ಹಾಗೂ ಗಣಪತಿ ದೇವರ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ, ನವರಾತ್ರಿ ಉತ್ಸವದ ವಿಶೇಷ ಆಕರ್ಷಣೆ ಹಾಗೂ 9 ದಿನಗಳ ಕಾಲ ವಿಶೇಷವಾಗಿ ಆರಾಧಿಸ್ಪಡುವ ಶಾರದಾ ಮಾತೆಯ ವಿಗ್ರಹವನ್ನು ಕುದ್ರೋಳಿ ಕ್ಷೇತ್ರದ ಅಂಗಣದಲ್ಲಿ ಪ್ರದಕ್ಷಿಣೆ ನಡೆಸಿ ದರ್ಬಾರು ಮಂಟಪಕ್ಕೆ ಚೆಂಡೆ, ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಹೊತ್ತು ತರಲಾಯಿತು. ದರ್ಬಾರು ಮಂಟಪದ ವೇದಿಕೆಯಲ್ಲಿ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ ದೀಪ ಬೆಳಗಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮಂಗಳೂರು ದಸರಾದ ಮತ್ತೊಂದು ವಿಶೇಷ ಆಕರ್ಷಣೆ ಹುಲಿವೇಷ ಕುಣಿತ. ಪುಟ್ಟ ಮಕ್ಕಳು ಸೇರಿದಂತೆ ಹುಲಿವೇಷಧಾರಿಗಳ ತಂಡ ಪ್ರತಿಷ್ಠಾಪನೆಗೊಂಡ ಶಾರದಾ ಮಾತೆಯ ವಿಗ್ರಹದ ಎದುರು ಕುಣಿಯುವ ಮೂಲಕ ದಸರಾ ಸಂಭ್ರಮಕ್ಕೆ ಮೆರುಗು ನೀಡಿದರು. ಬಳಿಕ ಹುಲಿವೇಷಧಾರಿಗಳು ಅಂಗಣದಲ್ಲಿ ಕುಣಿದು ಸೇರಿದ್ದ ಭಕ್ತರು, ಸಾರ್ವಜನಿಕರನ್ನು ರಂಜಿಸಿದರು.
ಮಂಗಳೂರು ದಸರಾ ಜನರ ದಸರಾ: ನಳಿನ್ ಕುಮಾರ್
ನಾರಾಯಣಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಈ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಈ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿಯವ ನೇತೃತ್ವದಲ್ಲಿ ಈ ಉತ್ಸವ ಮಂಗಳೂರು ದಸರಾ ಆಗಿ, ನಾಡ ಉತ್ಸವವಾಗಿ ಆಚರಿಸಲಾಗುತ್ತದೆ. ಕಳೆದ ವರ್ಷದ ಕೋವಿಡ್ ಕಾರಣದಿಂದ ನಿಯಮ ಪಾಲನೆಯೊಂದಿಗೆ ಉತ್ಸವ ಆಚರಿಸಲಾಗಿತ್ತು. ಈ ವರ್ಷವೂ ಕೋವಿಡ್ ನಿಯಮಪಾಲನೆಯೊಂದಿಗೆ ಉತ್ಸವ ನಡೆಸಲಾಗುತ್ತಿದೆ ಎಂದು ಉತ್ಸವವನ್ನು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಿಸಿದರು.
ಈ ನಾಡ ಹಬ್ಬವನ್ನು ಕೇವಲ ಕುದ್ರೋಳಿ ಕ್ಷೇತ್ರಕ್ಕೆ ಅಥವಾ ಆಡಳಿತ ಮಂಡಳಿಗೆ ಸೀಮಿತಗೊಳಿಸದೆ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಚಿಂತನೆಯೊಂದಿಗೆ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಗರದ ಅಲಂಕಾರವನ್ನು ಮಂಗಳೂರು ಮಹಾ ನಗರ ಪಾಲಿಕೆ ವಹಿಸಿಕೊಂಡಿರುವುದು ಅಭಿನಂದನೀಯ. ಸರಕಾರದ ಭಾಗವಾಗಿ ಈ ಹಬ್ಬ ನಡೆಸುವ ಮೂಲಕ ಜನರ ಹಬ್ಬವಾಗಿ ಇದು ನಡೆಸಲಾಗುತ್ತಿದೆ. ಮೈಸೂರು ದಸರಾದಲ್ಲಿ ರಾಜ್ಯ ಸರಕಾರ ಹೇಗೆ ಭಾಗಿಯೋ ಅದೇ ರೀತಿಯಲ್ಲಿ ಮಂಗಳೂರು ದಸರಾದಲ್ಲಿ ಮನಪಾ ಭಾಗಿಯಾಗುತ್ತಿದೆ ಎಂದು ಅವರು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ ಹೆಗ್ಜೆ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷ ಉರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಶೇಖರ್ ಪೂಜಾರಿ, ರವಿಶಂಕರ ಮಿಜಾರು, ಜಗದೀಪ್ ಡಿ. ಸುವರ್ಣ, ಕೆ. ಮಹೇಶ್ಚಂದ್ರ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ.ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ರಾಧಾಕೃಷ್ಣ, ಶೈಲೇಂದ್ರ ಸುವರ್ಣ, ಚಂದನ್ದಾಸ್, ಕಿಶೋರ್ ದಂಡೆಕೇರಿ, ಲೀಲಾಕ್ಷ ಕರ್ಕೇರಾ, ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬಳ್ಳಾಲ್ಬಾಗ್ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಮಂಜುಶ್ರೀ ನ್ಯೂಸ್
