ಮಂಜೇಶ್ವರ : ಕುಂಜತ್ತೂರು ಮೇಗಿನ ಮನೆ ನಿವಾಸಿ ರಂಗಭೂಮಿ ಕಲಾವಿದೆ, ಚಿತ್ರ ನಟಿ ಬೇಬಿ ರೈ ಯಾನೆ ಸುಮಿತ್ರಾ ರೈ (76) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು (28 - 11 - 2021 ಆದಿತ್ಯವಾರ) ರಾತ್ರಿ 9.15ಕ್ಕೆ ಕುಂಜತ್ತೂರಿನಲ್ಲಿರುವ ಮೇಗಿನ ಮನೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಹಿರಿಯ ರಂಗಭೂಮಿ ಕಲಾವಿದ, ಚಿತ್ರ ನಟ, ಮಂಗಳೂರು ನಂದಿಕೇಶ್ವರ ನಾಟಕ ಸಂಘದ ಸಂಸ್ಥಾಪಕರಾದ ಪಿ. ಬಿ ರೈಯವರ ಧರ್ಮಪತ್ನಿಯಾಗಿದ್ದಾರೆ. ಮೃತರು ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿಯಾಗಿದ್ದು
(ನಮ್ಮ ಸಂಸಾರ ಚಿತ್ರ)
ಕನ್ನಡ ಚಲನಚಿತ್ರ "ನಮ್ಮ ಸಂಸಾರ" (ರಾಜ್ ಕುಮಾರ್ ಜೊತೆ, ಕಪ್ಪು ಬಿಳುಪು ಚಿತ್ರ),
ಶಿವರಾಜ್ ಕುಮಾರ್ ಜೊತೆ "ಟಗರು" ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಕೋಸ್ಟಲ್ ವುಡ್ ನ ತುಳು ಚಲನಚಿತ್ರ ಪವಿತ್ರಾ,
ರಂಗನಟ ಪಡೀಲ್ ಜತೆ "ಚಾಲಿಪೋಲಿಲು" ಚಿತ್ರದಲ್ಲಿ ಅಜ್ಜಿಯ ಪಾತ್ರದಲ್ಲೂ, ದೇವದಾಸ್ ಕಾಪಿಕಾಡ್ ಜೊತೆ ಚಂಡಿಕೋರಿ, ಹಾಗೂ ಕೋರಿ ರೊಟ್ಟಿ, ಮತ್ತು ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಭೋಜರಾಜ್ ಎಮ್.ಬಿ.ಬಿ.ಎಸ್ ಮುಂತಾದ ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಸುಮಾರು 56 ವರ್ಷಗಳಿಂದ ಕಲಾವಿದರಾಗಿ ಸೇವೆ ಸಲ್ಲಿಸಿರುವ ಇವರು 35 ವರ್ಷಗಳಿಂದೀಚೆಗೆ ತಮ್ಮ ಸ್ವಂತ ಸಂಸ್ಥೆ ನಂದಿಕೇಶ್ವರ ನಾಟಕ ಸಂಘದಲ್ಲಿ ದುಡಿಯುತ್ತಿದ್ದರು. ಅಲ್ಲದೇ ಈ ಮೊದಲು ಇವರು ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಹಾಗೂ ಹುಡಿಗೇರಿ ಬಸವರಾಜ ನಾಟಕ ಕಂಪನಿಯಲ್ಲೂ ಪ್ರದರ್ಶನಗೊಂಡ ವಿವಿಧ ನಾಟಕಗಳಲ್ಲೂ ಪಾತ್ರ ನಿರ್ವಹಿಸಿದ್ದರು.
ಮೃತರು ಮಕ್ಕಳಾದ ರಂಗಭೂಮಿ, ಚಲನಚಿತ್ರ, ಕಿರುತೆರೆ ಕಲಾವಿದೆ ಶೋಭಾ ರೈ, ಪಂಚರಂಗಿ ಪೋಂ ಪೋಂ ಖ್ಯಾತಿಯ ರಾಘವೇಂದ್ರ ರೈ (ರಂಗಭೂಮಿ, ಚಲನಚಿತ್ರ, ಕಿರುತೆರೆ ಕಲಾವಿದರು), ಅಳಿಯ ವಿಜಯ ರೈ (ಗಾಯಕರು), ಸಹೋದರ ಸಹೋದರಿಯರಾದ ರಾಮಚಂದ್ರ ಶೆಟ್ಟಿ, ಪಾರ್ವತಿ ಹಾಗೂ ಅಪಾರ ಬಂಧು, ಮಿತ್ರ, ಬಳಗವನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ 10ಗಂಟೆಗೆ ಕುಂಜತ್ತೂರಿನ ಸ್ವಗೃಹ ಪರಿಸರದಲ್ಲಿ ನಡೆಯಲಿರುವುದು.
ಇವರ ನಿಧನಕ್ಕೆ ವೈಷ್ಣವಿ ಕಲಾವಿದರು ಮಂಜೇಶ್ವರ, ಸವಾಕ್ ಮಂಜೇಶ್ವರ, ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು, ಫ್ರೆಂಡ್ಸ್ ಕ್ಲಬ್(ರಿ.) ಜೋಡುಕಲ್ಲು, ನಂದಿಕೇಶ್ವರ ನಾಟಕ ಸಂಘದ ಸಹ ಕಲಾವಿದರು ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿತ್ರ ಸಹಿತ ವರದಿ:- ರತನ್ ಕುಮಾರ್ ಹೊಸಂಗಡಿ.
