ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಕಣ್ಣೂರು ವಾರ್ಡಿನ ಬಲ್ಲೂರಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮನೆಯ ನವೀಕರಣ ಕಾರ್ಯ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರು ಕುಟುಂಬಕ್ಕೆ ಕೀಲಿಗೈ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಶಾಸಕ ಕಾಮತ್, ಕಣ್ಣೂರಿನ ಬಲ್ಲೂರಿನಲ್ಲಿರುವ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಕುಟುಂಬದ ಮನೆಯು ಜೀರ್ಣಾವಸ್ಥೆಯಲ್ಲಿರುವ ಕುರಿತು ಸ್ಥಳೀಯ ಕಾರ್ಪೋರೇಟರ್ ಹಾಗೂ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದೆವು. ದಾನಿಗಳ ಸಹಕಾರದೊಂದಿಗೆ ಸರಿ ಸಮಾರು 5 ಲಕ್ಷ ವೆಚ್ಚದಲ್ಲಿ ಮನೆಯನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಮನೆಗೆ ಬೇಕಾದ ಜಾಗವನ್ನು ಸ್ಥಳೀಯರಾದ ಧೀರಜ್ ಶೆಟ್ಟಿ ಅವರ ಕುಟುಂಬವು ನೀಡಿದ್ದು ಮತ್ತಷ್ಟು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಕಣ್ಣೂರು ವಾರ್ಡಿನ ಕಾರ್ಯಕರ್ತರ ಶ್ರಮವೂ ಕೂಡ ಅನನ್ಯವಾಗಿದೆ ಎಂದು ಹೇಳಿದರು.
ಶಾಸಕನಾಗಿ ಆಯ್ಕೆಯಾದ ಪ್ರಾರಂಭದಿಂದ ಸದ್ಯ ಐದಕ್ಕೂ ಅಧಿಕ ಮನೆಗಳನ್ನು ದಾನಿಗಳ ಸಹಕಾರದಲ್ಲಿ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಗರದಲ್ಲಿ ಪ್ರತಿಯೊಂದು ಕುಟುಂಬಕ್ಕೂ ಸೂರು ಕಲ್ಪಿಸುವ ಕನಸಿದೆ ಎಂದು ಶಾಸಕ ಕಾಮತ್ ಹೇಳಿದರು.
ಸ್ಥಳೀಯ ಕಾರ್ಪೋರೇಟರ್ ಚಂದ್ರಾವತಿ ವಿಶ್ವನಾಥ್ ಅವರು ಮಾತನಾಡಿ, ಬಲ್ಲೂರಿನ ತೀರಾ ಬಡ ಕುಟುಂಬದ ಮನೆಯು ಕುಸಿಯುವ ಹಂತದಲ್ಲಿರುವ ಕುರಿತು ಶಾಸಕರಲ್ಲಿ ತಿಳಿಸಿದಾಗ ವ್ಯವಸ್ಥೆ ಮಾಡಿಕೊಡುವ ಕುರಿತು ಭರವಸೆ ನೀಡಿದ್ದರು. ಅದರಂತೆ 5 ಲಕ್ಷ ವೆಚ್ಚದಲ್ಲಿ ಮನೆಯನ್ನು ಅಭಿವೃದ್ಧಿಪಡಿಸಿದ್ದು ಶಾಸಕರು ಕೊಟ್ಟ ಭರವಸೆಯನ್ನು ಉಳಿಸಿ ಈ ಕುಟುಂಬಕ್ಕೆ ಆಸರೆಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಕಿರಣ್ ರೈ ಎಕ್ಕೂರು, ಅಜಯ್ ಕುಲಶೇಖರ, ಶಕ್ತಿ ಕೇಂದ್ರ ಅಧ್ಯಕ್ಷರಾದ ನವೀನ್ ಕುಲಾಲ್, ಬೂತ್ ಅಧ್ಯಕ್ಷರಾದ ವಿವೇಕ್ ಸುವರ್ಣ, ಮುಖಂಡರಾದ ಸುನಿಲ್ ಕುಮಾರ್, ಚೆನ್ನಪ್ಪ ಕುಲಾಲ್, ಗೀತಾನಂದ ಶೆಟ್ಟಿ, ಸ್ಥಳದಾನಿ ಧೀರಜ್ ಶೆಟ್ಟಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ವಸಂತ್ ಶೆಟ್ಟಿ ವೀರನಗರ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.
