ಮಂಗಳೂರು : ಮಂಗಳೂರು ನೆಹರು ಮೈದಾನದ ಸಮೀಪ ಉತ್ತರ ಪ್ರದೇಶ ಮೂಲದ ಕಾರ್ಮಿಕರೊಬ್ಬರು ಹಗಲು ವೇಳೆ ವಿಶ್ರಾಂತಿಗಾಗಿ ಮಲಗಿದ್ದ ವೇಳೆ ಆತನ ಮೊಬೈಲ್ ಕಳವುಗೈಯ್ಯಲು ಯತ್ನಿಸಿ ಓಡುತ್ತಿದ್ದ ಕಳ್ಳರಿಬ್ಬರನ್ನು ಪೋಲಿಸ್ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಘಟನೆ ಮಂಗಳೂರಿನ ಹೃದಯಭಾಗದ ಸ್ಟೇಟ್ ಬ್ಯಾಂಕ್ ಬಳಿ ನಡೆದಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಮುಂಭಾಗದ ನೆಹರು ಮೈದಾನದಲ್ಲಿ ಉತ್ತರಪ್ರದೇಶ ಮೂಲದ ಗ್ರಾನೈಟ್ ಕೆಲಸ ಮಾಡುವ ವ್ಯಕ್ತಿಯೊಬ್ಬ ಮಲಗಿದ್ದು ಈ ವೇಳೆ ಆತನ ಮೊಬೈಲ್ ಕಳವು ಮಾಡಿ ಖದೀಮನೊಬ್ಬ ಓಡಲೆತ್ನಿಸಿದ್ದಾನೆ ತಕ್ಷಣವೇ ಆತ ಹಾಗೂ ಸ್ಥಳೀಯರು ಎಚ್ಚೆತ್ತು ಬೊಬ್ಬೆ ಹಾಕಿ ಕಳ್ಳನನ್ನು ಓಡಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭ ಕಮೀಷನರೇಟ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಎಸ್ಐ ವರುಣ್ ಆಳ್ವ ಅವರು ಗಮನಿಸಿ ಸಿನಿಮೀಯ ರೀತಿಯಲ್ಲಿ ಆತನ ಬೆನ್ನಟ್ಟಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲು ಮೊಬೈಲ್ ಕಳವು ಮಾಡಿದ ಕಳ್ಳ ನಂತರ ಆಟೋ ಮೂಲಕ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಕಾರಿನ ಮೂಲಕ ಹಿಂಬಾಲಿಸಿದ ಎಎಸ್ಐ ವರುಣ್ ಆಳ್ವ ಆತ ಆಟೋ ಇಳಿದು ಓಡುತ್ತಿದ್ದಂತೆ ಹ್ಯಾಮಿಲ್ಟನ್ ಸರ್ಕಲ್ ಬಳಿ ಆತನನ್ನು ನೆಲಕ್ಕೆ ಕೆಡವಿ ಹಿಡಿದಿದ್ದಾರೆ. ಕಳ್ಳತನದಲ್ಲಿ ಮೂವರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಒಬ್ಬನನ್ನು ಬಂಧಿಸಿದ ಬಳಿಕ ಮತ್ತೊಬ್ಬ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
