ಮೂಡಬಿದ್ರೆ : ತೆಂಕುತಿಟ್ಟಿನ ಅನುಭವಿ ಯಕ್ಷಗಾನ ಕಲಾವಿದ ಶ್ರೀ ವಾಮನ್ ಕುಮಾರ್ ವೇಣೂರು ಅವರು ಇಂದು ಮೂಡಬಿದ್ರೆ ಸಮೀಪದ ಗಂಟಾಲಕಟ್ಟೆ ಎಂಬಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ನಿಧನ ಹೊಂದಿದ್ದಾರೆ. ಅವರು ಸಂಚರಿಸುತ್ತಿದ್ದ ಬೈಕ್ ಎದುರು ಭಾಗದಿಂದ ಬರುತ್ತಿದ ಮಾರುತಿ ಓಮ್ನಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ವಾಮನ್ ಕುಮಾರ್ ಅವರ ದೇಹ ರಸ್ತೆ ಪಕ್ಕದ ಚರಂಡಿಗೆ ಎಸೆಯಲ್ಪಟ್ಟಿದೆ. ಓಮ್ನಿಯ ಮುಂಭಾಗ ನುಜ್ಜುಗುಜ್ಜಾಗಿದೆ.
ಶ್ರೀ ವಾಮನ ಕುಮಾರರು ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಗೋಳಿತ್ಯಾರು ಎಂಬಲ್ಲಿ ಶ್ರೀ ಅಣ್ಣು ದೇವಾಡಿಗ ಮತ್ತು ಶ್ರೀಮತಿ ಮೋನಮ್ಮ ದಂಪತಿಗಳ ಪುತ್ರನಾಗಿ 1974 ಎಪ್ರಿಲ್ 18ರಂದು ಜನಿಸಿದರು. ಅವರ ಮನೆಯವರು (ಹಿರಿಯರಿಂದಲೂ) ವೇಣೂರು ಅಜಿಲ ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪದಾರ್ಥಿಗಳಾಗಿ ಸೇವೆ ಸಲ್ಲಿಸುತ್ತಾ ಬಂದವರು.
ವಾಮನ ಕುಮಾರರು ಓದಿದ್ದು ವೇಣೂರು ವಿದ್ಯೋದಯ ಶಾಲೆಯಲ್ಲಿ ಎಂಟನೇ ತರಗತಿ ವರೆಗೆ ಕಲಿತ ಇವರು ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು.
ಶ್ರೀ ವಾಮನ ಕುಮಾರರು ಕಳೆದ ಎಂಟು ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಈಗ ಸದ್ರಿ ಮೇಳದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
