ಮಂಗಳೂರು : ತುಳು ನಾಟಕ ಕಲಾವಿದರ ಒಕ್ಕೂಟ ರಿ. ಮಂಗಳೂರು ಇದರ ಪದಾಧಿಕಾರಿಗಳ ಸಭೆಯು ಒಕ್ಕೂಟದ ಅಧ್ಯಕ್ಷರಾದ ಲ.ಕಿಶೋರ್ ಡಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗೋಕುಲ್ ಸಭಾ ಭವನ ಕದ್ರಿಯಲ್ಲಿ ನಡೆಯಿತು. ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಲಾಕ್ಡೌನ್ನಿಂದಾಗಿ ಕಲಾವಿದರಿಗಾಗುತ್ತಿರುವ ಸಂಕಷ್ಟಗಳು ಮತ್ತು ಪರಿಹಾರ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರನ್ನು ಬೇಟಿ ಮಾಡಿ ಮನವರಿಕೆ ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಂಘ ಸಂಸ್ಥೆಗಳು ನಾಟಕ ಪ್ರದರ್ಶನ ನಡೆಸಲಾಗುವುದೋ ಇಲ್ಲವೋ ಎಂಬ ಗೊಂದಲದಲ್ಲಿವೆ, ವಾರಾಂತ್ಯದ ಕರ್ಫ್ಯೂನಿಂದಾಗಿ ವಾರಾಂತ್ಯದಲ್ಲಿ ನಡೆಸಲು ಉದ್ದೇಶಿತ ಪ್ರದರ್ಶನಗಳು ಸ್ಥಗಿತಗೊಳ್ಳುತ್ತಿವೆ. ಆರ್ಥಿಕ ಸಂಗ್ರಹಣೆಯ ಅಡಚನೆಯಿಂದಲೂ ಕೆಲವೊಂದು ಸಂಘ ಸಂಸ್ಥೆಗಳು ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಒಲವು ತೋರಿಸುತ್ತಿಲ್ಲ. ರಾಜ್ಯ ಸರಕಾರ ಸಂಪೂರ್ಣವಾಗಿ ಕರ್ಫ್ಯೂ ಹಿಂಪಡೆಯದೆ ಯಾರು ಯಾವುದೇ ರೀತಿಯ ಪ್ರತಿಭಟನೆಗಳನ್ನು ನಡೆಸಿದರೂ ನಿಷ್ರಯೋಜಕವಾಗುವುದು ಎಂಬ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾದವು.
ತಡರಾತ್ರಿ ಅಲ್ಲದಿದ್ದಲ್ಲಿ ಸೀಮಿತ ಅವಧಿಗಳಲ್ಲಿಯಾದರೂ ಕನಿಷ್ಟ ರಾತ್ರಿ 9:30 ಗಂಟೆಗಳ ಒಳಗಾದರೂ ನಾಟಕ ಪ್ರದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ನೀಡಬೇಕೆಂದು ಸದಸ್ಯರಿಂದ ಅಭಿಪ್ರಾಯ ವ್ಯಕ್ತವಾಯಿತು.
ಈ ಬಗ್ಗೆ ಶೀಘ್ರದಲ್ಲೇ ಸಂಬಂದಪಟ್ಟವರನ್ನು ಸಂಪರ್ಕಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಕಲಾವಿದರಾದ ಕೃಷ್ಣ ಬಪ್ಪಾಲ್ ಹಾಗೂ ಚಿತ್ರ ನಿರ್ದೇಶಕ, ನಾಟಕಕಾರ ಶರತ್ ಚಂದ್ರ ಕದ್ರಿ ಇವರ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಲು ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು, ಕೋಶಾಧಿಕಾರಿ ಮೋಹನ್ ಕೊಪ್ಪಲ ಕದ್ರಿ, ಕ್ಷೇಮನಿಧಿ ಸಂಚಾಲಕರಾದ ಪ್ರದೀಪ್ ಆಳ್ವ, ಮಧು ಬಂಗೇರ ಕಲ್ಲಡ್ಕ, ಗೋಕುಲ್ ಕದ್ರಿ, ವಸಂತಿ.ಜೆ ಪೂಜಾರಿ, ತಮ್ಮ ಲಕ್ಷ್ಮಣ , ವಿನಾಯಕ ಜೆಪ್ಪು ಅಲ್ಲದೆ ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು,
ಲಕ್ಷ್ಮಣ ಕುಮಾರ್ ಮಲ್ಲೂರು ಸ್ವಾಗತಿಸಿದರು. ಮಧು ಬಂಗೇರ ಕಲ್ಕಡ್ಕ ಧನ್ಯವಾದ ಸಮರ್ಪಿಸಿದರು..
