ಮೈಸೂರು: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಅಭಿರುಚಿ ಬಳಗ, ಆಸಕ್ತಿ ಪ್ರಕಾಶನ,ಚೈತ್ರ ಫೌಂಡೇಶನ್ (ರಿ ) ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಕಿರುರಂಗಮಂದಿರಲ್ಲಿ ನಡೆದ ಶ್ರೀ ಎನ್. ಎಸ್. ವಾಮನ್ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ "ಸರಿಯಾವುದು ಎಂದಾರಿಸು ಮನವೇ..." ಕೃತಿಗೆ ಎನ್. ಎಸ್. ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಮಡ್ದಿಕೆರೆ ಗೋಪಾಲ ನೆರವೇರಿಸಿ ಮಾತನಾಡಿ ಶ್ರೀಯುತ ವಾಮನ್ ಅವರ ಸಾಧನೆಗಳನ್ನು ಸ್ಮರಿಸಿದರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ವರ್ಷ ಅವರ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗೆಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುವ ಬಗೆಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಪ್ರಭ ಪತ್ರಿಕೆಯ ಸ್ಥಳೀಯ ಸಂಪಾದಕರಾದ ಶ್ರೀ ಅಂಶಿ ಪ್ರಸನ್ನಕುಮಾರ್ ಮಾತನಾಡಿ ಶ್ರೀಯುತ ವಾಮನ್ ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು ಅಲ್ಲದೇ ದೆಹಲಿ ಮಟ್ಟದಲ್ಲಿ ಕನ್ನಡ ನಾಟಕಗಳನ್ನು ಆಯೋಜಿಸುವ ಮೂಲಕ ಕನ್ನಡದ ಕಂಪನ್ನು ಹರಡಿದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾದಂಬರಿಗಾರ್ತಿ ಶ್ರೀಮತಿ ಉಷಾ ನರಸಿಂಹನ್ ಮಾತನಾಡಿ ಕನ್ನಡ ಸಾಹಿತಿಗಳ ಮೇರು ನಾಟಕಗಳನ್ನು ನಿರ್ದೇಶನ ಮಾಡಿ, ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದ್ದ ಶ್ರೀಯುತ ವಾಮನ್ ಅವರ ಸಾಹಸಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನಾಡು ಕಂಡ ಅಪ್ರತಿಮ ಸಾಧಕ ಎಂಬುದನ್ನು ಮನವರಿಕೆ ಮಾಡಿಸಿದರು.
ಇನ್ನುಳಿದಂತೆ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರಧ್ವಜ, ಶ್ರೀ ರಾಮ್ಪ್ರಸಾದ, ಶ್ರೀ ಮೈಸೂರು ಕೃಷ್ಣಮೂರ್ತಿ, ಡಾ. ಸುಧಾ ರಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟಕ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಆರ್. ಭೀಮಸೇನ ವಹಿಸಿ ಮಾತನಾಡಿ, ನಾಟಕ, ಬಾನುಲಿ ಮತ್ತು ಚಲನಚಿತ್ರ ರಂಗಕ್ಕೆ ಶ್ರೀಯುತ ವಾಮನ್ ಅವರ ಸೇವೆ ಅನನ್ಯವಾದುದು. ಅವರ ಶತಮಾನೋತ್ಸವ ಕಾರ್ಯಕ್ರಮ ತುಂಬಾ ಅರ್ಥಪೂರ್ಣ ಮತ್ತು ವಿಶೇಷತೆಯಿಂದ ಕೂಡಿದೆ
ಅದರೊಟ್ಟಿಗೆ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿ ಆಯ್ಕೆಯಾದ ಕೃತಿಗಳಿಗೆ ಅವರ ಹೆಸರಿನಲ್ಲಿ ಗೌರವಿಸುವ ಕಾರ್ಯ ಶ್ಲಾಘನೀಯವಾದುದು ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರು, ಅಭಿರುಚಿ ಬಳಗದ ಅಧ್ಯಕ್ಷರಾದ ಶ್ರೀ ಎನ್. ವಿ. ರಮೇಶ, ಆಸಕ್ತಿ ಪ್ರಕಾಶನ,ಚೈತ್ರ ಫೌಂಡೇಶನ್ (ರಿ ) ಮೈಸೂರಿನ ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀಮತಿ ಸುಧಾ ರಮೇಶ ಮತ್ತು ಶ್ರೀ ಕೆ. ರಮೇಶ. ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಹಿತಿಗಳು, ಸಾಹಿತ್ಯಸಕ್ತರು, ಕಲಾವಿದರು ಉಪಸ್ಥಿತರಿದ್ದರು.

ಅನಂತ ಧನ್ಯವಾದಗಳು ಸರ್
ReplyDelete