ಮಂಜೇಶ್ವರ : ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲು ಕೇರಳ ತುಳು ಅಕಾಡೆಮಿ ನೇತೃತ್ವ ದಲ್ಲಿ ಹೋರಾಟ ನಡೆಸಲು ಮುಂದಾಗುವುದಾಗಿ ಅಕಾಡೆಮಿ ಅಧ್ಯಕ್ಷ ಉಮೇಶ್ ಎಮ್ ಸಾಲಿಯಾನ್ ಹೇಳಿದರು. ತುಳು ಅಕಾಡೆಮಿಯ ರಾಮಣ್ಣ ರೈ ಚಾವಡಿಯಲ್ಲಿ ಇಂದು ಸಂಜೆ ನಡೆದ ತುಳು ಕ್ಯಾಲೆಂಡರ್ (ತುಳು ಕಾಲ ಕೋ0ದೆ )ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚ ದ್ರಾವಿಡ ಭಾಷೆಗಳಲ್ಲಿ ಅತೀ ಪ್ರಾಚೀನ ಭಾಷೆಯಾಗಿರುವ ತುಳು ಕೃಷಿಕರ, ಕಾರ್ಮಿಕರ ಆಡು ಭಾಷೆಯಾಗಿದೆ. ಆದರೆ ಸಾಹಿತ್ಹಿಕವಾಗಿ ಅದು ಮೌಲಿಕವಾಗಿದೆ. ಈ ಭಾಷೆಯನ್ನು ಪೋಷಿಸಿದರೆ ಸಂಸ್ಕೃತಿಯನ್ನು ಪೋಷಿಸಿದಂತೆ. ಭಾರತೀಯ ಇತರ ಭಾಷೆಗಳ ಸಾಲಿಗೆ ಸೇರಬೇಕಾದರೆ ಇದನ್ನು ಸಂವಿಧಾನದ ಎಂಟನೇ ಪರಿಚ್ಛೆದಕ್ಕೆ ಸೇರಿಸಿ ಮಾನ್ಯತೆ ಕಲ್ಪಿಸಬೇಕು. ಕೇಂದ್ರ ಸರಕಾರ ಈ ಬಗ್ಗೆ ವಿರೋಧಿ ನಿಲುವು ತಾಳಿದರೆ ಅಕಾಡೆಮಿಯ ನೇತೃತ್ವದಲ್ಲಿ ಜನಪರ ಹೋರಾಟಕ್ಕೆ ಮುಂದಾಗುವುದಾಗಿ ಉಮೇಶ್ ಎಮ್ ಸಾಲಿಯಾನ್ ಹೇಳಿದರು.
ತುಳು ಕಾಲ ಕೋoದೆಯನ್ನು ಬಿಡುಗಡೆಗೊಳಿಸಿ ಮೊದಲ ಪ್ರತಿಯನ್ನು ಮೀoಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿಯವರಿಗೆ ನೀಡಲಾಯಿತು.
ಕಾಲ ಕೋಂದೆಯನ್ನು ರಚಿಸಿದ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ನಿರ್ದೇಶಕ ಶ್ರೀ ಪ್ರವೀಣ್ ಎಸ್ ರಾವ್ ಅವರನ್ನು ತುಳು ಅಕಾಡೆಮಿ ವತಿಯಿಂದ ಸ್ಮರಣಿಕೆ ನೀಡಿ ಅಭಿನಂಧಿಸಲಾಯಿತು. ಕ್ಯಾಲೆಂಡರ್ ರಚನೆಯ ಹಿನ್ನಲೆ ಮತ್ತು ಅನುಭವಗಳನ್ನು ಪ್ರವೀಣ್ ಎಸ್ ರಾವ್ರವರು ಹಂಚಿಕೊಂಡರು. ಪಾರ್ಥಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಸಮಿತಿ ಕಾರ್ಯದರ್ಶಿ ಶ್ರೀ ಡಿ. ಬೂಬ, ಅಕಾಡೆಮಿ ಸದಸ್ಯೆ ಸಚಿತಾ ರೈ ಪೆರ್ಲ ಶುಭಹಾರೈಸಿದರು.
ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್.ಬಿ. ಸ್ವಾಗತಿಸಿದರು. ಸದಸ್ಯ ರಾಧಾಕೃಷ್ಣ ಉಳಿಯತಡ್ಕ ಪ್ರಾಸ್ತವಿಕ ನುಡಿಗಳನ್ನಾಡಿದರು. ಸದಸ್ಯೆ ಗೀತಾ ಸಾಮಾನಿ ವಂದಿಸಿದರು. ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
