ಮಂಜೇಶ್ವರ:- ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಕಾಮಗಾರಿ ಕೊನೆಯ ಹಂತವನ್ನು ತಲುಪಿದ್ದು, ಏಪ್ರಿಲ್ 03 ರಿಂದ 11 ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಆ ಪ್ರಯುಕ್ತ ಇಂದು ಬೆಳಗ್ಗೆ ಕ್ಷೇತ್ರದ ಸಭಾಂಗಣದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅನುಗ್ರಹ ಸಂದೇಶ ನೀಡಿದರು.
ಕ್ಷೇತ್ರದ ತಂತ್ರಿವರ್ಯರಾದ ವರ್ಕಾಡಿ ದಿನೇಶ್ ಕೃಷ್ಣ ಭಟ್ ಹಾಗೂ ವೇದಮೂರ್ತಿ ದಡ್ಡ0ಗಡಿ ಬಾಲಕೃಷ್ಣ ಭಟ್ ದೀಪ ಪ್ರಜ್ವಲನಗೈದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಶ್ರೀಧರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಧರ್ಮೇಮಾರ್, ಗ್ರಾಮದ ತಂತ್ರಿ ಸುಬ್ರಹ್ಮಣ್ಯ ಅನಲತ್ತಾಯ, ಸೇವಾ ಸಮಿತಿ ಅಧ್ಯಕ್ಷ ಚಂದಪ್ಪ ಶೆಟ್ಟಿ ಕಜೆಕೋಡಿ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ ಕಡಂಬಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರು, ಕ್ಷೇತ್ರದ ಆಡಳಿತ ಮೊಕ್ತೇಸರ ಎಸ್.ಎನ್ ಕಡಂಬಾರು, ಗೌರವ ಸಲಹೆಗಾರರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗೋಪಾಲ ಶೆಟ್ಟಿ ಅರಿಬೈಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ರಾವ್ ಕಡಂಬಾರ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸಂಕಬೈಲು ಸತೀಶ್ ಅಡಪ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಡಂಬಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ, ಸೇವಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಮಹಿಳಾ ಸಮಿತಿ, ಸೇವಾ ಸ್ಫೂರ್ತಿಯ ಪಧಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಊರ ಭಕ್ತ ಮಹಾಶಯರು ಭಾಗಿಗಳಾದರು.
✍️ ರತನ್ ಕುಮಾರ್ ಹೊಸಂಗಡಿ.
📸 ಚಿದಾನಂದ ಅರಿಬೈಲ್
