ಮಂಜೇಶ್ವರ:- ಅಗೋಚರವಾಗಿದ್ದ ದೇವತಾ ಸಾನಿಧ್ಯ ವ್ಯಕ್ತ ಪ್ರಪಂಚಕ್ಕೆ ಕಾಣಿಸಿಕೊಳ್ಳುವುದು ದೈವ ಸಂಕಲ್ಪದಿಂದ. ಅದನ್ನು ಬೆಳಕಿಗೆ ತರುವ ಸತ್ಕಾರ್ಯದಲ್ಲಿ ತೊಡಗಿಕೊಳ್ಳುವುದಕ್ಕೂ ದೈವಾನುಗ್ರಹಬೇಕು. ಆ ಅನುಗ್ರಹದ ವಿಶೇಷದಿಂದಲೇ ವರ್ಕಾಡಿಯ ಬಜಿಲಕರಿಯದ ಈ ಗ್ರಾಮದಲ್ಲಿ ಶಾರಂಗಪಾಣಿಯನಾಗಿ ಮಹಾವಿಷ್ಣುವು ಅವತರಿಸಿ ಇದೀಗ ಹೊಸ ದೇವಾಲಯ ನಿರ್ಮಾಣಗೊಂಡಿದೆ. ಇದೀಗ ಕ್ಷೇತ್ರವು ಬ್ರಹ್ಮಕಲಶೋತ್ಸವಕ್ಕೆ ಸಿದ್ದವಾಗಿರುವುದರಿಂದ ಊರ ಭಕ್ತರ ಬಹುದಿನಗಳ ಸಂಕಲ್ಪಿತ ಕಾರ್ಯ ಈಡೇರಿ ಧನ್ಯತೆಯಭಾವ ಮೂಡಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ನುಡಿದರು. ಅವರು ವರ್ಕಾಡಿ ಬಜಿಲಕರಿಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರಂಗಪಾಣಿ ಮಹಾವಿಷ್ಣು ದುರ್ಗಾ ಕ್ಷೇತ್ರದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಸಂಜೆ ನಡೆದ ಮೊದಲ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದು, ಆಶೀರ್ವಚನ ನೀಡುತ್ತಾ ಮಾತನಾಡಿದರು.
ಕೈರಂಗಳ ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ. ರಾಜಾರಾಮ್ ಭಟ್ ಪ್ರಧಾನ ಭಾಷಣ ಮಾಡಿದರು. ಹೊಸದಿಗಂತ ಪತ್ರಿಕೆಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ.ಎಸ್ ದಿಕ್ಸೂಚಿ ಭಾಷಣ ಮಾಡಿದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯ್ಕ್ ಅಲಿಕೋಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಮೊಕ್ತೇಸರರು ಹಾಗೂ ಗಡಿ ಪ್ರಧಾನರು, ಅರಸ ಪೂಜಾರಿಗಳು ಮತ್ತು ಅಧ್ಯಕ್ಷರಾದ ನ್ಯಾ. ವಿಠಲ್ ಭಟ್ ಮೊಗಸಾಲೆ, ದೇವಿಪ್ರಸಾದ್ ಪೊಯ್ಯತ್ತಾಯ, ಕುಶಲ ಕುಮಾರ ಪಾತೂರಾಯ, ಸೋಮನಾಥ ಕಾರಂತ ಮರಿಕಾಪು, ಶಂಕರ ಮೋಹನ ಪೂಂಜ ಅಡೆಕಳ, ಪುಷ್ಪರಾಜ್ ತುಪ್ಪೆ, ನಾರಾಯಣ ಶೆಟ್ಟಿ ಬಲೆತ್ತೋಡು, ಶ್ರೀಧರ ಶೆಟ್ಟಿ ಪಾವೂರು ಗುತ್ತು, ಉದಯ ಶಂಕರ ಶೆಟ್ಟಿ ಬಲೆತೋಡು, ವಿಠಲ್ ಆಳ್ವ, ಪಿ.ಸೋಮಪ್ಪ ದೈಗೋಳಿ, ಗೋವಿಂದ ಆಚಾರ್ಯ, ಆನಂದ ಪೂಜಾರಿ, ಮೋಹನ್ ಶೆಟ್ಟಿಗಾರ್, ಕೊರಗಪ್ಪ ಪೂಜಾರಿ, ಐತಪ್ಪ ನಲಿಕೆ, ಕ್ಷೇತ್ರದ ಆಡಳಿತ ಮೊಕ್ತೇಸರ ಅಜಿತ್ ನಾಯ್ಕ್, ಪುರುಷೋತ್ತಮ ದತ್ತ ನಗರ, ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈದರು. ನ್ಯಾ. ಉಮೇಶ್ ನಾಯ್ಕ್ ಪಿಲಿಕಲ ಸ್ವಾಗತಿಸಿ, ಶಶಿ ಕುಮಾರ್ ಕುಳೂರು (ತುಳುಭಾಷೆಯಲ್ಲಿ) ಕಾರ್ಯಕ್ರಮ ನಿರೂಪಿಸಿ, ಶಶಿಧರ್ ನಾಯ್ಕ್ ಪೊಯ್ಯೆ ವಂದಿಸಿದರು.
ಬೆಳಗ್ಗೆ ಕ್ಷೇತ್ರದ ತಂತ್ರಿವರ್ಯರಿಗೆ ಪೂರ್ಣ ಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಮಜೀರ್ಪಳ್ಳದಿಂದ ವಿವಿಧ ಕ್ಷೇತ್ರ, ಮಠ, ಮಂದಿರ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಕ್ಷೇತ್ರಕ್ಕೆ ಹರಿದುಬಂತು. ಮಾತೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಹಸಿರುವಾಣಿ ಮೆರವಣಿಗೆಗೆ ವೈಭವತೆ ಕಂಡುಬಂತು.
ಇಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸ್ವಾಗತ ನೃತ್ಯ, ಹಾಗೂ ಮಂಗಳಾದೇವಿ ಮೇಳದವರಿಂದ "ಸುದರ್ಶನ ವಿಜಯ - ಭಾರ್ಗವ ವಿಜಯ" ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
✍️ ರತನ್ ಕುಮಾರ್ ಹೊಸಂಗಡಿ.
📸 ದೀಪಕ್ ರಾಜ್ ಉಪ್ಪಳ. ಮತ್ತು ಹರೀಶ್ ನಾಯ್ಕ್ ಕಟ್ಟೆಪುಣಿ.
