ಮಂಜೇಶ್ವರ: ಮಂಜೇಶ್ವರ ಗ್ರಾಮದ ಗಡಿಪ್ರಧಾನರು, ಸುವರ್ಣ ಕುಟುಂಬದ ಹಿರಿಯ ಗಡಿ ಪ್ರಧಾನರು, ದೈವಾರಾಧನೆಯಲ್ಲಿ ನುರಿತ ಸಲಹೆಗಾರರು, ಕೋಟಿ-ಚೆನ್ನಯ ರೊಟ್ಟಿಗೆ ಆರಾಧಿಸಲ್ಪಡುವ "ಕುಜುಂಬ ಕಾಂಜವರ ವಂಶಾವಳಿ" ಶ್ರೀ ಕ್ಷೇತ್ರ ಉದ್ಯಾವರ ಮಾಡದ ಅಣ್ಣ ದೈವದ ಪರಂಪರೆಯ ಹಿರಿಯ ದೈವಪರಿಚಾರಕರು ಭಕ್ತಜನರ ಗೌರವಾನ್ವಿತ ಆಪ್ತರಾಗಿದ್ದ ಮಂಜೇಶ್ವರದ ಹೊಸಬೆಟ್ಟು ನಿವಾಸಿ ತಿಮ್ಮಪ್ಪ ಕಾಂಜರು (74) ಅಸೌಖ್ಯ ನಿಮ್ಮಿತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಇಂದು ಅಪರಾಹ್ನ 1 ಗಂಟೆ ವೇಳೆ *ವಿಧಿವಶ* ರಾದರು. ಮೃತರು ಕಳೆದ 50 ವರ್ಷಗಳಿಂದ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಸ್ಥಾನದಲ್ಲಿ ಅಣ್ಣ ದೈವದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಾರ್ಯದಲ್ಲಿ ಚೂರೂ ಕೂಡಾ ಚ್ಯುತಿ ಬರದಂತೆ ನಿಷ್ಟೆಯಿಂದ ದೈವದ ಚಾಕರಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಬಾರಿ ಹೆಸರು ವಾಸಿಯಾಗಿದ್ದರು. ಕಳೆದ 50 ವರ್ಷಗಳಿಂದ ವಾರದ ಮಂಗಳವಾರದ ಪೂಜೆ, ಬೆಳಗ್ಗಿನ ಪೂಜೆ ಅಥವಾ ಸಂಜೆ ಪೂಜೆ ವೇಳೆ ಹಾಗೂ ಸಿಂಹ ಮಾಸದ 1 ತಿಂಗಳ ಪರ್ಯಂತ ನಡೆಯುವ ವಿಶೇಷ ಪೂಜೆಯ ವೇಳೆ ಮಂಜೇಶ್ವರ ಹೊಸಬೆಟ್ಟುವಿನಲ್ಲಿರುವ ತಮ್ಮ ಮನೆಯಿಂದ ಶುಚಿಭೂತರಾಗಿ ಮಡಿವಂತಿಕೆಯಲ್ಲಿಯೇ ಸುಮಾರು ಮೂರು ಕಿಲೋ ಮೀಟರ್ ನಡೆದುಕೊಂಡೇ ಉದ್ಯಾವರ ಮಾಡ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿ ಹಿಂತಿರುಗಿ ಬರುತ್ತಿದ್ದರು ಇದು ಇವರ ವಿಶೇಷ ವ್ಯಕ್ತಿತ್ವಕ್ಕೆ ಕಾರಣವಾಗಿತ್ತು.
ದಿ. ಕೊರಗಪ್ಪ ಪೂಜಾರಿ - ದಿ. ಸೇಸಪ್ಪ ದಂಪತಿಯ ಪುತ್ರನಾಗಿರುವ ತಿಮ್ಮಪ್ಪ ಕಾಂಜರು ಪತ್ನಿ: ನಾಗಮ್ಮ, ಮಕ್ಕಳಾದ: ಪದ್ಮನಾಭ ದೇವಿಪುರ, ತಾರಾನಾಥ, ಸುರೇಶ್ ಮಂಜೇಶ್ವರ (ರಂಗ ಕಲಾವಿದ, ಲಕುಮಿ ತಂಡ ಮಂಗಳೂರು), ದೇವದಾಸ್, ಗಿರೀಶ್, ಜಯಲಕ್ಷ್ಮಿ (ಮಾಲಕಿ: ಶಾರದಾ ಪ್ರಿಂಟರ್ಸ್ ಹೊಸಂಗಡಿ), ಅಳಿಯ: ಕೃಷ್ಣ ಜಿ. ಮಂಜೇಶ್ವರ (ಸಂಸ್ಥಾಪಕರು: ಶಾರದಾ ಆರ್ಟ್ಸ್ ಕಲಾವಿದರು ಹಾಗೂ ಐಸಿರಿ ಕಲಾವಿದರು ಮಂಜೇಶ್ವರ), ಸೊಸೆಯಂದಿರಾದ: ವಿಜಯಶ್ರೀ, ಶಕುಂತಳಾ, ಸುಜಾತ, ರಮಿತಾ, ಹಾಗೂ ಏಕ ಸಹೋದರಿಯನ್ನು ಹಾಗೂ ಅಪಾರ ಬಂಧು - ಮಿತ್ರವರ್ಗವನ್ನು ಅಗಲಿದ್ದಾರೆ. ಮೃತರು ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಗೌರವ ಸಲಹೆಗಾರರಾಗಿದ್ದರು. ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರು ಸಂಸ್ಥೆಯ ಫೋಷಕರಾಗಿದ್ದರು. ಇವರ ಸೇವೆಯನ್ನ ಮನಗಂಡು ವಿವಿಧ ಕಡೆಗಳಲ್ಲಿ ಗೌರವಾದರಗಳನ್ನು ನೀಡಿ ಗೌರವಿಸಲಾಯಿತು. ಮೃತರ ಅಂತಿಮ ವಿಧಿವಿಧಾನ ಸಂಜೆ 5 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಹೊಸಬೆಟ್ಟುವಿನಲ್ಲಿರುವ ಸ್ವ - ಗೃಹದಲ್ಲಿ ನಡೆಯಲಿದೆಯೆಂದು ಕುಟುಂಬಸ್ಥರು ತಿಳಿಸಿದ್ದಾರೆ.
✍️ ರತನ್ ಕುಮಾರ್ ಹೊಸಂಗಡಿ.
