ಸಿಗಂದೂರು : ದೇವರನ್ನು ನಂಬದಿರುವ ಈ ಕಾಲದಲ್ಲಿಯೂ ತನ್ನ ಶಕ್ತಿ, ಮಹಿಮೆಯಿಂದ ಭಕ್ತರಲ್ಲಿ ಭಯವೂ ಹುಟ್ಟಿಸಿದ್ದಾಳೆ ಸಿಗಂದೂರಿನ ಚೌಡೇಶ್ವರಿ. ತನ್ನ ವಿಭಿನ್ನ ಶಕ್ತಿಯ ರೂಪದಲ್ಲಿ ಹಲವೆಡೆ ನೆಲೆಸಿರುವ ದೇವಿ ರೂಪಗಳಲ್ಲಿ ಈ ಚೌಡೇಶ್ವರಿಯೂ ಹೌದು.
ದೈವೀ ಶಕ್ತಿ ಪೀಠಗಳಲ್ಲಿ ಶ್ರೀ ಸಿಗಂದೂರು ಕ್ಷೇತ್ರವೂ ಒಂದು. ತನ್ನನ್ನು ಹುಡುಕಿಕೊಂಡು ಬರುವ ಭಕ್ತರಿಗೆ ಕೇಳಿದ್ದನ್ನೆಲ್ಲಾ ದಯ ಪಾಲಿಸೋ ಈ ದೇವಿಯ ಮಹಿಮೆ ಅಪಾರ. ಕಳ್ಳ ಕಾಕರೂ ಈ ದೇವಿ ಹೆಸರು ಹೇಳಿದರೆ ಬೆದರುತ್ತಾರೆ. ಅದಕ್ಕೆ, 'ಸಿಗಂದೂರು ಚೌಡೇಶ್ವರಿಯ ಕಾವಲಿದೆ, ಎಚ್ಚರಿಕೆ..' ಎಂಬ ಬೋರ್ಡ್ ಎಲ್ಲಡೆ ರಾರಾಜಿಸುವುದೂ ಸಾಮಾನ್ಯ.
ಆಸ್ತಿ ವಿಚಾರ, ಬೆಲೆ ಬಾಳುವ ವಸ್ತು ಕಳೆದುಕೊಂಡವರು ಹೆಚ್ಚಾಗಿ ಈ ದೇವಿಯ ಮೊರೆ ಹೋಗುತ್ತಾರೆ. ಸ್ಥಳಿಯರು ಹೇಳುವಂತೆ, ಸಾವಿರಾರು ಭಕ್ತರ ಸಮಸ್ಯೆ ಪರಿಹರಿಸಿದ್ದಾಳೆ.
ಸಿಗಂದೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇರುವ ಪ್ರಸಿದ್ಧ ಯಾತ್ರಾಸ್ಥಳ. ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿದೆ. ಸಿಗಂದೂರೇಶ್ವರಿ ಎಂದೂ ಈ ಅಮ್ಮನವರನ್ನು ಕರೆಯುತ್ತಾರೆ. ಮಕರ ಸಂಕ್ರಾಂತಿ ವೇಳೆ ಇಲ್ಲಿ ಜಾತ್ರೆ ನಡೆಯುತ್ತದೆ.
ಸ್ಥಳ ವಿಶೇಷ : -
500 ವರ್ಷದ ಇತಿಹಾಸವಿದೆ ದೇವಿಗೆ!
ಒಂದಾನೊಂದು ಕಾಲದಲ್ಲಿ ಶೇಷಪ್ಪ ಎಂಬಾತ ಭೇಟೆಯಾಡಲು ಸಿಗಂದೂರು ಕಾಡಿಗೆ ಹೋಗಿದ್ದನಂತೆ. ದಾರಿ ತಪ್ಪಿ ಕಳೆದು ಹೋಗದಂತೆ, ರಾತ್ರಿ ಅಲ್ಲಿಯೇ ವಿಶ್ರಾಂತಿ ಪಡೆಯಲು ಮರದ ಕೆಳಗೆ ಮಲಗಿದ್ದನಂತೆ. ಆತನ ಕನಸಿನಲ್ಲಿ ದೇವಿ ಬಂದು, ತಾನಿಲ್ಲಿ ನೆಲೆಸಿರುವುದಾಗಿ ಹೇಳಿ ಗುಡಿ ಕಟ್ಟಿಸಲು ಆಜ್ಞೆ ಮಾಡುತ್ತಾಳೆ. ಮರು ದಿನವೇ ಆತ ಊರಿಗೆ ಹೋಗಿ ನಡೆದ ಘಟನೆಯನ್ನು ಬ್ರಾಹ್ಮಣ ದುಗ್ಗಜ್ಜ ಬಳಿ ಹೇಳಿಕೊಂಡು, ಗುಡಿ ಕಟ್ಟಿಸುತ್ತಾನೆ.
ಚೌಡಮ್ಮ ದೇವಿಯು ಕಳ್ಳರ ಭಯವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದವಳಾಗಿದ್ದಾಳೆ. ಇಲ್ಲಿ ಹರಕೆ ಹೊತ್ತುಕೊಂಡಿರುವ ಭಕ್ತರು ಕಳ್ಳಕಾಕರ ಭಯವಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಹರಕೆ ಹೊತ್ತುಕೊಂಡಿರುವ ಭಕ್ತರ ಮನೆಯಲ್ಲಿ ಕಳ್ಳತನವಾದರೆ ಕಳ್ಳರನ್ನು ದೇವಿ ಭಯಂಕರವಾಗಿ ಶಿಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ. ಆದುದರಿಂದ ಈ ಭಾಗದಲ್ಲಿ ಹೆಚ್ಚಿನ ಮನೆ, ಆಸ್ತಿಗಳಲ್ಲಿ ದೇವಿ ಶಿಕ್ಷಿಸುವ ಬಗ್ಗೆ ಬರೆದಿರುವ ಫಲಕಗಳನ್ನು ಹರಕೆ ಹೊತ್ತುಕೊಂಡಿರುವವರು ಹಾಕಿರುತ್ತಾರೆ. ಅಲ್ಲದೆ ಅಮೂಲ್ಯ ವಸ್ತುಗಳು ಕಳೆದು ಹೋದಲ್ಲಿ ದೇವಿಯಲ್ಲಿ ಕೂಡಲೆ ಹರಕೆ ಹೊತ್ತುಕೊಂಡಲ್ಲಿ ವಸ್ತುಗಳು ಸಿಗುತ್ತವೆ ಎಂಬ ನಂಬಿಕೆ ಈ ಭಾಗದ ಭಕ್ತರಲ್ಲಿದೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಇಲ್ಲಿ ಇವೆ.
ದೇವಸ್ಥಾನದ ಸಮಯ:
ಪೂಜೆ ಮಾಡುವುದು ಬೆಳಗ್ಗೆ ಮಾತ್ರ. ಸಂಜೆ ದರ್ಶನ ಮಾಡಬಹುದು.
ಬೆಳಗ್ಗೆ 4.30-7.00 ಹಾಗೂ 9.00-2.00
ದರ್ಶನ ಸಂಜೆ 4.00 - 7.00
ತಲುಪುವದು ಹೇಗೆ ?
ಚೌಡೇಶ್ವರಿ ನೆಲೆಸಿರುವುದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ 35 ಕಿ.ಮೀ. ದೂರದಲ್ಲಿರುವ ಸಿಗಂದೂರಿನಲ್ಲಿ. ಈಕೆಯನ್ನು ಸಿಗಂದೂರಮ್ಮ ಎಂದೂ ಕರೆಯುತ್ತಾರೆ. ಸಾಗರದಿಂದ ಪ್ರತಿ ಗಂಟೆಗೊಮ್ಮೆ ಬಸ್ ಇದ್ದು, ಕೇವಲ 2 ಗಂಟೆಗಳಲ್ಲಿ ಈ ಕ್ಷೇತ್ರವನ್ನು ತಲುಪಬಹುದು. ಅದೂ ಲಾಂಚ್ನಲ್ಲಿ ದೇವಸ್ಥಾನವನ್ನು ತಲುಪಬೇಕಾಗಿದ್ದು, ಪ್ರಕೃತಿ ಸೌಂದರ್ಯವನ್ನು ಅನುಭವಿಸಲೂ ಇದು ಪ್ರಶಸ್ತ ಸ್ಥಳ.
ಸಿಗಂದೂರು ಸಾಗರದಿಂದ ಸುಮಾರು ೩೨ ಕಿ.ಮಿ. ದೂರದಲ್ಲಿದೆ. ಸಾಗರದಿಂದ ಆವಿನಹಳ್ಳಿ ದಾರಿಯಾಗಿ ಹೊಳೆಬಾಗಿಲುವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು ಎದುರಾಗುತ್ತದೆ. ಇಲ್ಲಿ ಮುಂದೆ ಸೇತುವೆ ಇಲ್ಲ. ಕಡವನ್ನು (Launch/Barge) ಬಳಸಿಕೊಂಡು ಹಿನ್ನೀರನ್ನು ದಾಟಬೇಕಾಗುತ್ತದೆ. ಈ ದಾರಿಯಾಗಿ ಬರುವ ಎಲ್ಲಾ ವಾಹನಗಳಿಗೂ ಈ ಕಡವನ್ನು ಬಳಸುವುದು ಅನಿವಾರ್ಯ. ಹಿನ್ನೀರು ಸುಮಾರು ೨ ಕಿ.ಮಿ. ಅಗಲವಿದೆ. ಕಡವು ನಿಗದಿತ ಸಮಯಗಳಲ್ಲಿ ಮಾತ್ರ ಲಭ್ಯ. ಇನ್ನೊಂದು ದಡದಲ್ಲಿರುವ ಕಳಸವಳ್ಳಿಯಿಂದ ದೇವಸ್ಥಾನ ಸುಮಾರು ೨ ಕಿ.ಮಿ. ದೂರದಲ್ಲಿದೆ.
ಕೊಲ್ಲೂರು ಇಂದ ಬರುವವರು ನಾಗೋಡಿ ಘಟ್ಟವನ್ನು ಏರಿ ನಾಗೋಡಿಯಿಂದ ತುಮರಿ ಮಾರ್ಗವಾಗಿ ಸಿಗಂದೂರಿಗೆ ಬರಬಹುದು. ಇಲ್ಲಿ ಯಾವುದೇ ಹಿನ್ನೀರು ಸಿಗುವುದಿಲ್ಲ. ಕೊಲ್ಲೂರಿನಿಂದ ಸಿಗಂದೂರು ಸುಮಾರು ೪೫ ಕಿ.ಮಿ. ದೂರವಿದೆ.
ಸಾಗರ, ಶಿವಮೊಗ್ಗ ಮತ್ತು ಭಟ್ಕಳದಿಂದ ಸಿಗಂದೂರಿಗೆ ನೇರ ಬಸ್ ಸೌಲಭ್ಯವಿದೆ. ಹೆಚ್ಛಿನ ಬಸ್ಸುಗಳು ಇಲ್ಲದಿರುವುದರಿಂದ ಖಾಸಗಿ ವಾಹನ ಮಾಡಿಕೊಂಡು ಬರುವುದೊಳ್ಳೆಯದು.
ಲೇಖನ : ಶ್ರೀ ಮನೋಜ್ ಕುಲಾಲ್ ಕೊಡಕ್ಕಲ್ ಮತ್ತು ಶ್ರೀ ಚಂದ್ರೇಶ್ ಮಾನ್ಯ

.jpeg)
.jpeg)
.jpeg)
.jpeg)