ಕಾಸರಗೋಡು : ಕಾಸರಗೋಡಿನ ಕನ್ನಡಿಗರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಿದ್ದು, ಇದೀಗ ಮತ್ತೊಮ್ಮೆ ಆ ಪ್ರಯತ್ನ ನಡೆದಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕನ್ನಡದವರಿಗೆ ಮೀಸಲಾಗಿರುವ ಮಂಜೇಶ್ವರ, ಕುಂಬಳೆ ಹಾಗೂ ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿಗಳ ಹುದ್ದೆಯೊಂದಿಗೆ, ಈ ಮೂರೂ ಉಪಜಿಲ್ಲೆಗಳನ್ನು ಒಳಗೊಂಡ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲೆಯಲ್ಲಿ ಕನ್ನಡದವರೇ ಜಿಲ್ಲಾ ಶಿಕ್ಷಣಾಧಿಕಾರಿಗಳಾಗಿ ನೇಮಕವಾಗಬೇಕೆಂಬ ಆದೇಶ ಇದ್ದರೂ, ಇದೀಗ ಮತ್ತೊಮ್ಮೆ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕನ್ನಡೇತರರನ್ನು ನೇಮಕ ಮಾಡುವ ಆದೇಶ ಹೊರಡಿಸುವ ಮೂಲಕ ಕಾಸರಗೋಡು ಕನ್ನಡಿಗರ ಹಕ್ಕನ್ನು ಕಸಿಯುವ ಪ್ರಯತ್ನ ನಡೆದಿದೆ. ಇದನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನಾಲಯದ ಕಚೇರಿಗೆ ಕರೆ ಮಾಡಿ, ಅಸಂವಿಧಾನಿಕವಾಗಿ ನಡೆಯುವ ಈ ನೇಮಕಾತಿಯನ್ನು ಕೂಡಲೇ ರದ್ದುಗೊಳಿಸಿ, ಕೂಡಲೇ ಆ ಹುದ್ದೆಗೆ ಕನ್ನಡದವರನ್ನು ನೇಮಿಸಬೇಕೆಂದು ಆಗ್ರಹಿಸಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ನೇಮಕಾತಿಯನ್ನು ಹಿಂಪಡೆದು ಕನ್ನಡದವರನ್ನು ನೇಮಿಸದಿದ್ದರೆ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘಟನೆಯ ಅಧಿಕೃತರು ತಿಳಿಸಿರುತ್ತಾರೆ.

