ಉಪ್ಪಳ: ರಾಷ್ಟ್ರೀಯ ಹೆದ್ದಾರಿ 66ರ ಮಂಗಲ್ಪಾಡಿ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿಗಳು ತುಂಬಿ ತುಳುಕಾಡುತ್ತಿತ್ತು ಇದನ್ನು ನಿರ್ಮೂಲನ ಮಾಡದ ಸ್ಥಳೀಯಾಡಳಿತ ಹಾಗೂ ಮಂಜೇಶ್ವರ ಶಾಸಕರ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಇಂದು ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಜರುಗಲಿರುವ ಆರೋಗ್ಯ ಮೇಳದ ಉದ್ಘಾಟನೆಯನ್ನು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅವರು ನಿರ್ವಹಿಸಲಿದ್ದು, ತ್ಯಾಜ್ಯವನ್ನು ತೆರವು ಮಾಡದೆ ಆರೋಗ್ಯ ಮೇಳವನ್ನು ಉದ್ಘಾಟಿಸುವ ಶಾಸಕರ ವಿರುದ್ಧ ಪ್ರತಿಭಟನಾರ್ಥವಾಗಿ ಅದೇ ತ್ಯಾಜ್ಯ ರಾಶಿಗಳ ಮೇಲೆ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಅಣಕು ಮಾಡಿ ಫ್ಲೆಕ್ಸ್ ಹಾಕಿದ ಘಟನೆ ನಡೆದಿದೆ, ರಾಷ್ಟ್ರೀಯ ಹೆದ್ದಾರಿಯ 66ರ ಎರಡೂ ಬದಿಗಳಲ್ಲಿ ಉಪ್ಪಳ ಪೇಟೆ, ನಯಾಬಜಾರ್, ಕೈಕಂಬ, ಬಂದ್ಯೋಡು, ಮುಂತಾದೆಡೆಗಳಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳ ರಾಶಿ ಬಿದ್ದಿದ್ದು, ಇದನ್ನು ತೆರವು ಮಾಡದೆ ಆರೋಗ್ಯ ಇಲಾಖೆ ಆರೋಗ್ಯ ಮೇಳ ಎಂಬ ಕಪಟ ನಾಟಕವನ್ನು ಮಾಡುತ್ತಿದ್ದು, ಇದನ್ನು ಮಂಜೇಶ್ವರ ಶಾಸಕರು ಇಂದು ಉದ್ಘಾಟಿಸಬೇಕಿತ್ತು.ಇಂದು ಆರೋಗ್ಯ ಮೇಳ ನಡೆಯುವ ಇದೇ ಸ್ಥಳದಲ್ಲಿಯೇ ರಾಶಿಬಿದ್ದ ತ್ಯಾಜ್ಯ ಗಳ ಮೇಲೆ ಮಂಜೇಶ್ವರ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಫ್ಲೆಕ್ಸ್ ಹಾಕಿ ಕುಹಕ ಮಾಡಲಾಗಿದೆ.



