ಉಳ್ಳಾಲ : ಹೆದ್ದಾರಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಮೀನು ಸಾಗಿಸುವ ಕ್ಯಾಂಟರ್ ಲಾರಿ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ರಾ.ಹೆ. 66 ರ ತೊಕ್ಕೊಟ್ಟು ಸಮೀಪದ ಕುಂಪಲ ಬೈಪಾಸ್ನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ, ಬೇಳ ಗ್ರಾಮದ ಮಾನ್ಯ ನಿವಾಸಿ ನಿತಿನ್ ಮಾನ್ಯ(27) ಮೃತ ಯುವಕ. ನಿತಿನ್ ಅವರು ಸೆಲ್ಕೊ ಸೋಲಾರ್ ಕಂಪನಿಯ ಕಾಸರಗೋಡು ಶಾಖೆಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರಂತೆ. ಅವರಿಂದು ಕೃಷ್ಣ ಪ್ರಸಾದ್ ಎಂಬವರ ಮೋಟಾರ್ ಬೈಕಲ್ಲಿ ಮಂಗಳೂರಿಗೆ ಬಂದು ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಮಂಗಳೂರಿನಿಂದ ಕುಂಬಳೆಗೆ ವಾಪಸಾಗುತ್ತಿದ್ದ ವೇಳೆ ತೊಕ್ಕೊಟ್ಟು ಸಮೀಪದ ಕುಂಪಲ ಬೈಪಾಸ್ ಹೆದ್ದಾರಿಯಲ್ಲಿ ವಾಹನಗಳ ವೇಗ ಮಿತಿಗಾಗಿ ಹಾಕಲಾಗಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟಿದ್ದಾರೆ. ಇದೇ ವೇಳೆ ಕೇರಳಕ್ಕೆ ಧಾವಿಸುತ್ತಿದ್ದ ಮೀನು ತುಂಬಿದ ಕ್ಯಾಂಟರ್ ಲಾರಿ ನಿತಿನ್ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೃಷ್ಣಪ್ರಸಾದ್ ಅವರ ಬೈಕನ್ನ ನಿತಿನ್ ಕಳೆದ ಎರಡು ವಾರಗಳಿಂದ ಬಳಸುತ್ತಿದ್ದರಂತೆ. ನಿತಿನ್ ಅವರು ಇಂದು ಮಂಗಳೂರಿಗೆ ಯಾಕಾಗಿ ಬಂದಿದ್ದಾರೆಂದು ತಿಳಿದಿಲ್ಲ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

