" ಛಾಪು " ಒತ್ತಿದ , " ಸುಂದರ " ಪಾತ್ರ ಚಿತ್ರಣಕ್ಕೆ ಹೆಸರಾದ ಕುಂಬಳೆ ಸುಂದರ ರಾವ್ರವರು ನಿನ್ನೆ ಮುಂಜಾನೆ ನಿಧನರಾದ ಆಘಾತಕಾರಿ ವಿಷಯ ಮನಸ್ಸನ್ನು ಘಾತಿಗೊಳಿಸಿತು . ಯಕ್ಷಗಾನ ಆಟ-ಕೂಟಗಳಲ್ಲಿ ವಿಜೃಂಭಿಸಿ , ರಾಜಕೀಯ, ಧಾರ್ಮಿಕ, ಸಾಮಾಜಿಕ ವಲಯದಲ್ಲಿಯೂ ಗುರುತಿಸಿಕೊಂಡ ಕುಂಬ್ಳೆಯವರು ಯಾವುದೇ ಪಾತ್ರಗಳನ್ನೂ ಸಮರ್ಥವಾಗಿ ಪ್ರಸ್ತುತಪಡಿಸಿ , ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು . ನಾಲ್ಕು ದಶಕಗಳಿಗೂ ಮಿಕ್ಕಿ ಮಂಗಳೂರಿನಲ್ಲೇ ನೆಲೆಸಿದ್ದರೂ , ಹುಟ್ಟಿದ ಊರಾದ *ಕುಂಬ್ಳೆ* ಸುಂದರರಾಯರ ಹೆಸರಿನ ಪ್ರಾರಂಭದಲ್ಲಿ ಅಂಟಿಕೊಂಡಿದೆ .
ಕುಂಬ್ಳೆಯವರು ಮೂತ್ರ ಸಂಬಂಧೀ ಕಾಯಿಲೆಯ ತಪಾಸಣೆಗಾಗಿ ಮೊನ್ನೆ ಭಾನುವಾರ ಮಂಗಳೂರಿನ ಮಂಗಳೂರು ನರ್ಸಿಂಗ್ ಹೋಂ ಆಸ್ಪತ್ರೆಗೆ ದಾಖಲಾಗಿದ್ದರು . ವೈದ್ಯರು ಇಂದು ಅವರನ್ನು ಡಿಸ್ಚಾರ್ಜ್ ಮಾಡುತ್ತೇವೆ ಎಂದೂ ಹೇಳಿದ್ದರು . ಆದರೆ , ದುರದೃಷ್ಟವಶಾತ್ , ಇಂದು ಮುಂಜಾನೆ 3.30 ಗಂಟೆಗೆ ಕುಂಬ್ಳೆಯವರಿಗೆ ಹೃದಯಾಘಾತವಾಯಿತು . ವೈದ್ಯರು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿದರೂ , ಫಲಕಾರಿಯಾಗದೇ , ನಿಧನರಾದರು . 88 ವರ್ಷದ , ಹಿಂದಿನ ಸಾಮಗ ಸಹೋದರರು , ಡಾ.ಶೇಣಿ , ದೇರಾಜೆ , ತೆಕ್ಕಟ್ಟೆ , ಮಾರೂರು , ಕುರಿಯ , ಅಗರಿ , ಕಡತೋಕ , ಎಂಪೆಕಟ್ಟೆ , ಪುತ್ತೂರು , ನಯನ ಕುಮಾರ್ , ಚಂದ್ರಗಿರಿ , ಚಿಪ್ಪಾರು , ನಿಡ್ಲೆ ನರಸಿಂಹ ಭಟ್ , ವಾ.ಸಾಮಗ , ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ , ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ , ಪದ್ಯಾಣ ಗಣಪತಿ ಭಟ್ , ಬಲಿಪ ಭಾಗವತರು , ರಘುರಾಮ ಹೊಳ್ಳ , ಅರುವ , ಕೊಳ್ಯೂರು , ಗೋವಿಂದ ಭಟ್ , ಡಾ.ಜೋಷಿ , ಮೂಡಂಬೈಲು , ಶಂಭು ಶರ್ಮ ಮುಂತಾದವರು ಹಾಗೂ ಈಗಿನ ಕಲಾವಿದರ ನಡುವಿನ ಕೊಂಡಿಯಾದ ಕುಂಬ್ಳೆ ಸುಂದರ್ ರಾವ್ ರವರ ನಿಧನ , ಯಕ್ಷಗಾನಕ್ಕೊಂದು ದೊಡ್ಡ ನಷ್ಟ .
ಶ್ರೀಕೃಷ್ಣ , ಶ್ರೀರಾಮ , ನಹುಷ , ಚ್ಯವನ , ವಿಶ್ವಾಮಿತ್ರ , ಭರತ , ಕರ್ಣ , ವಿಷ್ಣು , ದ್ರೋಣ ,ಅತಿಕಾಯ , ಪರೀಕ್ಷಿತ , ಹನೂಮಂತ , ಋತುಪರ್ಣ , ಅಗ್ನಿವರ್ಣ , ಜಮದಗ್ನಿ , ಭೀಷ್ಮ ,ಸುಧನ್ವ , ದೇವವ್ರತ ,ಉತ್ತರಭೂಪ , ಪರಶುರಾಮ , ಈಶ್ವರ , ಧರ್ಮಸ್ಥಳ ಕ್ಷೇತ್ರಮಹಾತ್ಮೆಯ ಗೋವಿಂದ ದೀಕ್ಷಿತ , ಹೆಗ್ಗಡೆ ಮುಂತಾದ ಪಾತ್ರಗಳಲ್ಲಿ ಜನಪ್ರಿಯರಾಗಿ ಜನಮಾನಸದಲ್ಲಿ ಪ್ರತಿಷ್ಠೆಗೊಂಡವರು .ಶ್ರೀಕೃಷ್ಣನ ಪಾತ್ರವಂತೂ ಕುಂಬ್ಳೆಯವರಿಗೆ ಅಪಾರ ಪ್ರಸಿದ್ಧಿ ತಂದಿತ್ತು . ಪಡ್ರೆ ಚಂದುವರವರ ನಂತರದಲ್ಲಿ , ಯಕ್ಷರಂಗದಲ್ಲಿ ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ ಕುಂಬ್ಳೆಯವರು ಸಾತ್ವಿಕ , ಭಾವಪೂರ್ಣ ಹಾಗೂ ಭಕ್ತಿಪ್ರಧಾನ ಪಾತ್ರಗಳಲ್ಲಿ ಮಿಂಚಿದ ಶ್ರೇಷ್ಠ ಕಲಾವಿದರು . ಕುಂಬ್ಳೆಯವರು ನಿರ್ವಹಿಸಿದ ಕೆಲವು ಪಾತ್ರಗಳನ್ನು ಇಂದಿಗೂ ಬೇರೆ ಕಲಾವಿದರು ಅದೇ ಮಟ್ಟದಲ್ಲಿ ನಿರ್ವಹಿಸಲು ಸಾಧ್ಯವಾಗದು ಎಂಬಲ್ಲಿಗೆ ಕುಂಬ್ಳೆಯವರ ಅಪ್ರತಿಮ ಪ್ರತಿಭಾ ಸಾಮರ್ಥ್ಯವನ್ನು ಗುರುತಿಸಬಹುದು . ತನ್ನ ಅಸ್ಖಲಿತ ವಾಕ್ಪಟುತ್ವದಿಂದ , ಕನ್ನಡ ಭಾಷೆಯ ಸೊಗಸಾದ ನಿರೂಪಣೆ ಮತ್ತು ಸಂಭಾಷಣೆಗಳಿಂದ ಕುಂಬ್ಳೆ ಸುಂದರ ರಾಯರು ಕಲಾಭಿಮಾನಿಗಳ ಮನಗೆದ್ದವರು . ಸರಳ ಹಾಗೂ ಸುಂದರ ಭಾಷೆ , ಪುರಾಣ , ಉಪನಿಷತ್ , ರಾಮಾಯಣ ,
ಮಹಾಭಾರತ ಗಳ ಆಳವಾದ ಜ್ಞಾನ , ತತ್ ಕ್ಷಣಕ್ಕೆ ಉತ್ತರ ಕೊಡಬಲ್ಲ ಅಪ್ರತಿಮವಾದ ಪ್ರತ್ಯುತ್ಪನ್ನಮತಿ , ಸಂಭಾಷಣೆಯಲ್ಲಿ ಸಮೃದ್ಧವಾಗಿ ಪ್ರಾಸಗಳನ್ನು ಬಳಸುವ ಶೈಲಿ , ಸಂದರ್ಭೋಚಿತವಾಗಿ ಸಂಸ್ಕ್ರತ ಶ್ಲೋಕಗಳ ಬಳಕೆ , ಪಾತ್ರಗಳಲ್ಲಿ ಪರಕಾಯಪ್ರವೇಶ ಮಾಡಿ ಭಾವಪೂರ್ಣವಾಗಿ ಪಾತ್ರ ಚಿತ್ರಣ - ಇವೆಲ್ಲವೂ ಕುಂಬ್ಳೆಯವರನ್ನು ಶ್ರೇಷ್ಠ ಅರ್ಥಧಾರಿ ಹಾಗೂ ವೇಷಧಾರಿ ಎಂಬ ನೆಗಳ್ತೆಗೆ ಭಾಜನರನ್ನಾಗಿ ಮಾಡಿತ್ತು .
ಕಾಯರ್ಪಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿಗಳ ಸುಪುತ್ರರಾಗಿ 20.03 .1934 ರಂದು ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ ಸುಂದರ ರಾಯರು ಕಲಿತದ್ದು ಏಳನೆಯ ತರಗತಿ. ಸುಪ್ರಸಿದ್ಧ ವೇಷಧಾರಿ ಕುಂಬ್ಳೆ ಕುಟ್ಯಪ್ಪುರವರಿಂದ ಯಕ್ಷಗಾನದ ಪ್ರಾಥಮಿಕ ನಾಟ್ಯಾಭ್ಯಾಸ ಮಾಡಿ 1953ರಲ್ಲಿ ಕೂಡ್ಲು ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ತಮ್ಮ ಪ್ರಥಮ ತಿರುಗಾಟ ನಡೆಸಿದರು. ಮುಂದೆ ಇರಾ ಸೋಮನಾಥೇಶ್ವರ, ಸುರತ್ಕಲ್ ಮತ್ತು ಧರ್ಮಸ್ಥಳ ಮೇಳಗಳಲ್ಲಿ 5 ದಶಕಗಳ ಕಾಲ ಯಕ್ಷಗಾನ ಕಲಾವಿದನಾಗಿ ದುಡಿದ ಅನುಭವ ಕುಂಬ್ಳೆಯವರದ್ದು . ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಇಪ್ಪತ್ತೈದು ವರ್ಷ ಸತತ ಕಲಾಸೇವೆ ಮಾಡಿರುವುದು ಅವರ ಹೆಚ್ಚುಗಾರಿಕೆ. ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದಲ್ಲಿ ಬಹು ಬೇಡಿಕೆಯ ಅರ್ಥಧಾರಿಯಾಗಿ ಗುರುತಿಸಿಕೊಂಡಿದ್ದ ಕುಂಬ್ಳೆಯವರದ್ದು ಸರಳ , ಸುಂದರ ಹಾಗೂ ಆಕರ್ಷಕ ಶೈಲಿ . ವಾದ - ಸಂವಾದಗಳು ರಸಪೂರಿತ . ಮಾತುಗಾರಿಕೆಯಲ್ಲಿ ಪ್ರಾಸಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದ್ದ ಕಾರಣ " ಪ್ರಾಸದ ಕುಂಬ್ಳೆ " ಅಥವಾ " ಕುಂಬ್ಳೆ ಪ್ರಾಸ " ಎಂಬ ವಿಶೇಷಣ ಕುಂಬ್ಳೆಯವರಿಗಿತ್ತು .
" ಯಾರು ನಿನ್ನ ತಂದೆ
ಏಕೆ ಇಲ್ಲಿ ಬಂದೆ
ಹೇಳು ನನ್ನ ಮುಂದೆ
ನಾಚಿಕೆ ಪಡಬೇಡ ಹಿಂದೆ "
" ಮಾಲತೀ ನೀನು ಎಲ್ಲಿ ಮಾಲುತಿ
ನನ್ನ ಬಳಿ ಬಂದರೆ ನೀನೇರುವೆ ಉನ್ನತಿ
ಆಗ ಏರುವುದು ನಿನ್ನ ಕೀರುತಿ "
( ಧರ್ಮಸ್ಥಳ ಕ್ಷೇತ್ರಮಹಾತ್ಮೆಯಲ್ಲಿ ಗೋವಿಂದ ದೀಕ್ಷಿತರಾಗಿ )
" ಕೃಷ್ಣಾ , ನೀನು ಪರ್ವತ
ನಾನು ಪ್ರಪಾತ
ನೀನು ಸಿಂಧು
ನಾನು ಸಿಡಿದು ಬಿದ್ದ ಒಂದು ಬಿಂದು
ದೇವಾ ನಾವಿಬ್ಬರೂ ಹೇಗೆ ಒಂದು ಹೇಗೆ ಒಂದು "
( ಮಹಾರಥಿ ಕರ್ಣದಲ್ಲಿ ಕರ್ಣನಾಗಿ )
" ಓ ನೀರೆ
ಅಲ್ಲಿ ಕಾಣುವುದೆಲ್ಲಾ ನೀರೇ
ಬಳಿ ಬಾರೆ ,ಮೊಗ ತೋರೆ "
( ಶಂತನುವಿನ ಪಾತ್ರದಲ್ಲಿ )
" ಶರಸೇತು ಬಂಧನ " ದಲ್ಲಿ ವಿಪ್ರವೇಷಧಾರಿ ಶ್ರೀಕೃಷ್ಣನಾಗಿ ,
" ಇಲ್ಲಿ ನಾನೊಬ್ಬ ಹಾರುವ ( ಬ್ರಾಹ್ಮಣ )
ಅಲ್ಲೊಬ್ಬ ಮರದಿಂದ ಮರಕ್ಕೆ ಹಾರುವ ( ಹನೂಮಂತ )
ಇನ್ನೊಬ್ಬ ಅಗ್ನಿಗೆ ಹಾರುವ ( ಅರ್ಜುನ ) "
ಮುಂತಾದ ಪ್ರಾಸಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದರು . ಕುಂಬ್ಳೆಯವರ ಪ್ರಾಸ ಕೇಳಲೆಂದೇ ಬರುವ ಪ್ರೇಕ್ಷಕವೃಂದವನ್ನೇ ಕುಂಬ್ಳೆಯವರು ಹೊಂದಿದ್ದರು . ಆದರೆ ಮುಂದೆ ಬೇರೆ ಕಲಾವಿದರೂ ಕುಂಬ್ಳೆಯವರ ಪ್ರಾಸದ ಶೈಲಿಯನ್ನು ಅನುಕರಿಸತೊಡಗಿದರು . ಆದ ಕಾರಣ ಅರ್ಥ ಏಕತಾನವಾಗಕೂಡದೆಂಬ ಕಾರಣಕ್ಕಾಗಿ ಕುಂಬ್ಳೆಯವರು ಪ್ರಾಸಬದ್ಧ ಮಾತುಗಾರಿಕೆಯನ್ನು ಬಿಟ್ಟರು .
ಯಕ್ಷಗಾನದಲ್ಲಿ ಶೇಣಿಯವರ ಖಳ ಪಾತ್ರಗಳಿಗೆ ನಾಯಕನಾಗಿ ವಿಜೃಂಭಿಸಿದವರು ಕುಂಬ್ಳೆಯವರು . 1980- 90 ರ ದಶಕದಲ್ಲಿ ಮಂಗಳೂರಿನ ಪುರಭವನದಲ್ಲಿ ಹಾಗೂ ಇನ್ನಿತರ ತಾಳಮದ್ದಳೆ ಕೂಟಗಳಲ್ಲಿ ಜರಗುವ ಹೆಚ್ಚಿನ ಎಲ್ಲಾ ಯಕ್ಷಗಾನ ಪ್ರದರ್ಶನಗಳಲ್ಲಿ ಶೇಣಿಯವರ ಎದುರಾಳಿಯಾಗಿದ್ದವರು ಕುಂಬ್ಳೆಯವರೇ . ತೆಕ್ಕಟ್ಟೆಯವರನ್ನು ಹೊರತು ಪಡಿಸಿದರೆ ಕುಂಬ್ಳೆಯವರೇ ಶೇಣಿಯವರ ಎದುರು ಹೆಚ್ಚು ಭಾರಿ ನಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡವರು . ಶೇಣಿಯವರ " ಖಡಕ್ ಶೈಲಿ " ಗೆ ಕುಂಬ್ಳೆಯವರ " ಸೌಮ್ಯ ಮಾರುತ್ತರ " ಆ ಕಾಲದಲ್ಲಿ ಪ್ರಸಿದ್ಧಿಯಾಗಿತ್ತು . ಶೇಣಿಯವರು ಒಮ್ಮೆ ಪ್ರಹಸ್ತನಾಗಿ ಕುಂಬ್ಳೆಯವರ ಅಂಗದನಿಗೆ
" ನೀನು ಇಷ್ಟು ವೀರ ಹಾಗು ಬುದ್ಧಿವಂತ ಆಗಲು ನಮ್ಮ ರಾವಣನೇ ಕಾರಣ . ಸಣ್ಣ ಮಕ್ಕಳ ತೊಟ್ಟಿಲಿಗೆ ಆನೆ , ಕುದುರೆ ಕಟ್ಟುವುದು ಯಾಕೆ ? ಮುಂದಕ್ಕೆ ಆ ಮಕ್ಕಳು ಆನೆಯನ್ನೋ ಕುದುರೆಯನ್ನೋ ಏರಲೆಂಬ ಕಾರಣಕ್ಕೆ . ಆದರೆ ನೀನು ಸಣ್ಣವನಿದ್ದಾಗ ನಿನ್ನ ತೊಟ್ಟಿಲಿಗೆ ಕಟ್ಟಿದ್ದು ನಮ್ಮ ಪ್ರಭುಗಳಾದ ರಾವಣನನ್ನು . ರಾವಣನನ್ನು ನೋಡಿ ನೋಡಿ ನಿನಗೆ ರಾವಣನ ಶೌರ್ಯ ಬಂದಿದೆ " ಎಂದರು .
ಕುಂಬ್ಳೆಯವರೂ ಬಿಡಲಿಲ್ಲ .
" ಹೌದು . ಆನೆ , ಕುದುರೆ ಕಟ್ಟಿದರೆ ಆ ಮಗು ಆನೆಕುದುರೆ ಏರುವ ಸಾಹಸಿಯಾಗುತ್ತಾನೆ .
ಆದರೆ ನನ್ನ ತೊಟ್ಟಿಲಿಗೆ ಕಟ್ಟಿದ್ದು ನಿನ್ನ ರಾವಣನನ್ನಲ್ಲವೇ ? ನಾನೀಗ ಅವನ ಎದೆಯನ್ನು ಏರಬಲ್ಲೆ "
ಎಂದಾಗ ಪ್ರೇಕ್ಷಕರಿಂದ ಕರತಾಡನ .
" ರಾವಣ ಮೋಕ್ಷ " ದಲ್ಲಿ ರಾವಣನಾಗಿ ಶೇಣಿಯವರು , " ನಿನ್ನನ್ನು ಸೋಲಿಸಿಯೇ ಸೀತೆಯನ್ನು ತರಬಹುದಿತ್ತು . ಆದರೆ ನಿನ್ನನ್ನು ನಮ್ಮ ಲಂಕೆಯಲ್ಲೇ ಕೊಲ್ಲಬೇಕೆಂದು ಸೀತೆಯನ್ನು ಕದ್ದು ತಂದದ್ದು "
ಎಂದಾಗ ಕುಂಬ್ಳೆಯವರು ಶ್ರೀರಾಮನಾಗಿ
" ರಾವಣಾ , ನಾನೂ ಹಾಗೆಯೇ . ನಿನ್ನನ್ನು ಕೊಲ್ಲಬೇಕೆಂದೇ ದಕ್ಷಿಣಕ್ಕೆ ಬಂದದ್ದು . ಇಲ್ಲದಿದ್ದಲ್ಲಿ ಪಿತೃವಾಕ್ಯ ಪರಿಪಾಲನೆಗಾಗಿ ಉತ್ತರದಲ್ಲಿ ಕಾಡಿರಲಿಲ್ಲವೇ ? " ಎಂದಿದ್ದರು .
ಸಮಕಾಲೀನ ರಾಜಕೀಯವನ್ನು ರಂಗಕ್ಕೆ ಸಮರ್ಥವಾಗಿ , ಪ್ರಸಂಗದ ಚೌಕಟ್ಟನ್ನು ಮೀರದೇ ಕುಂಬ್ಳೆಯವರು ತರುತ್ತಿದ್ದುದು ಉಲ್ಲೇಖನೀಯ . ತಮ್ಮ ಎದುರಾಳಿ ರಾಜಕೀಯ ವ್ಯಕ್ತಿಗಳೂ ಕುಂಬ್ಳೆಯವರ ಈ ಶೈಲಿಯನ್ನು ವಿರೋಧಿಸದೇ ಸಹೃದಯದಿಂದ ಸ್ವೀಕರಿಸುತ್ತಿದ್ದರು . ಅಯೋಧ್ಯೆಯ ಪ್ರಕರಣ ಕಾವೇರಿದ ಸಂದರ್ಭದಲ್ಲಿ , ಮುಲಾಯಂ ಸಿಂಗ್ ರವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಮಯ . ಆಗ ಅಯೋಧ್ಯೆಯ ರಾಮಜನ್ಮಭೂಮಿಯ ದೇವಸ್ಥಾನಕ್ಕೆ ಯಾರೂ ಪ್ರವೇಶಿಸದಂತೆ ಬೇಲಿ ಹಾಕಲಾಗಿತ್ತು . ಅದೇ ಕಾಲದಲ್ಲಿ ಧರ್ಮಸ್ಥಳ ಮೇಳದವರಿಂದ " ಮಹಾಶೂರ ಭೌಮಾಸುರ " ಪ್ರಸಂಗ ಚಾಲ್ತಿಯಲ್ಲಿತ್ತು. ಶ್ರೀಕೃಷ್ಣನಾಗಿ ಕುಂಬ್ಳೆಯವರು, ಋಷಿ ಪಾತ್ರದ ನಯನ ಕುಮಾರ್ರಲ್ಲಿ " ಋಷಿಗಳೇ , ನೀವು ಎಲ್ಲಿಂದ ಬಂದಿರಿ? " ಎಂದಾಗ ನಯನಕುಮಾರ್ , " ನಾವು ಉತ್ತರದಿಂದ ಬಂದೆವು " ಎಂದಾಗ ಕುಂಬ್ಳೆಯವರು " ಋಷಿಗಳೇ , ಅಯೋಧ್ಯೆಯ ರಾಮ ಜನ್ಮಭೂಮಿಗೆ ಹೋಗಿದ್ದಿರಾ ? " ಎಂದರು . ಆಗ , ನಯನಕುಮಾರ್ " ಹೋಗಿದ್ದೆವು ದೇವಾ . ಆದರೆ , ಒಳಗೆ ಹೋಗಲು ಆಗಲಿಲ್ಲ . ಸುತ್ತಲೂ ಬೇಲಿ ಹಾಕಿ ನಿರ್ಬಂಧಿಸಿದ್ದರು ಎಂದರು. ಆಗ, ಕುಂಬ್ಳೆಯವರು " ಋಷಿಗಳೇ, ಇನ್ನು ಸ್ವಲ್ಪ ಕಾಲ ಕಾಯಿರಿ. ಆ ದುಷ್ಟರನ್ನು ಸಂಹರಿಸಿ ಲೋಕೋದ್ಧಾರ ಮಾಡುತ್ತೇನೆ " ಎಂದರು. (ನರಕಾಸುರನ ದೌರ್ಜನ್ಯವನ್ನು ಸಮಕಾಲೀನ ಸಮಸ್ಯೆಯೊಂದಿಗೆ ಸಮನ್ವಯಿಸಿ ಹೇಳಿದ್ದರು) ಆರ್.ಎಸ್. ಎಸ್ನ ಕಟ್ಟಾ ಸ್ವಯಂಸೇವಕರಾದ ಕುಂಬ್ಳೆಯವರು ರಾಷ್ಟ್ರಭಕ್ತಿಯ ವಿಚಾರಧಾರೆಗಳನ್ನು ಸಂದರ್ಭೋಚಿತವಾಗಿ ರಂಗದಲ್ಲಿ ಪ್ರಸ್ತಾಪಿಸುತ್ತಿದ್ದರು.
ಆರ್.ಎಸ್.ಎಸ್ನ ಗಣವೇಷಧಾರಿಯಾಗಿ ಸಂಘದ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕುಂಬ್ಳೆಯವರು ಹಲವಾರು ಭಾರಿ ಭೌಧಿಕ್ನಲ್ಲೂ ಭಾಗವಹಿಸಿದ್ದಾರೆ . ತನ್ನ ಹಾಸ್ಯ, ಪ್ರಾಸಭರಿತ ಭಾಷಣಗಳಿಂದ ಕುಂಬ್ಳೆಯವರು ಅಪಾರ ಜನಸ್ತೋಮವನ್ನು ಆಕರ್ಶಿಸುವ ಸೂಜಿಕಲ್ಲು ಎಂದರೆ, ಅದು ಉತ್ಪ್ರೇಕ್ಷದ ಮಾತಲ್ಲ . ತನ್ನ ಪ್ರಖರ ದೇಶಭಕ್ತಿಯ ಉಪನ್ಯಾಸಗಳಿಂದ ಪ್ರಮುಖ ಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದರು . ತಮ್ಮ ಅರ್ಥಗಾರಿಕೆಯಲ್ಲೂ ಸಂದರ್ಭೋಚಿತವಾಗಿ ಆರೆಸ್ಸೆಸ್ಸ್ನ ವಿಚಾರಧಾರೆಗಳನ್ನು ತರುತ್ತಿರುವ ಚಾಕಚಕ್ಯತೆ ಕುಂಬ್ಳೆಯವರಿಗೆ ಮಾತ್ರ ಇತ್ತೆಂಬುದು ಸುಳ್ಳಲ್ಲ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಹೆಗ್ಗಡೆಯ ಪಾತ್ರದಲ್ಲಿ ಹಿಂದೂ ಧರ್ಮದ ಔನತ್ಯವನ್ನು ಅತ್ಯಂತ ಸಮರ್ಪಕವಾಗಿ ಬಿಂಬಿಸಿ ಪಾತ್ರದ ಘನತೆಯನ್ನು ಪ್ರಸ್ತುತಪಡಿಸಿದ ಹಿರಿಮೆ ಕುಂಬ್ಳೆಯವರದ್ದು .
ಸುಂದರ ರಾಯರು ಅಬುಧಾಬಿ, ದುಬಾೖ, ಬೆಹರಿನ್ ಮೊದಲಾದ ರಾಷ್ಟ್ರಗಳಲ್ಲಿ ಯಕ್ಷಗಾನ ತಂಡದೊಂದಿಗೆ ಸಂಚಾರ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಹಲವಾರು ವರ್ಷ ಚೌತಿಯ ಸಂದರ್ಭದಲ್ಲಿ ತನ್ನದೇ ಕಲಾವಿದರ ತಂಡದೊಂದಿಗೆ ಕರ್ನಾಟಕದ ಉದ್ದಗಲಕ್ಕೆ ಸಂಚರಿಸಿ ನೂರಾರು ಕಾಲಮಿತಿಯ ಯಕ್ಷಗಾನ ಪ್ರದರ್ಶಗಳನ್ನು ನೀಡಿದ ಅನುಭವವೂ ಅವರಿಗಿದೆ. ಇನ್ನೂರಕ್ಕಿಂತ ಹೆಚ್ಚು ಧ್ವನಿ ಸುರುಳಿಗಳು ಐವತ್ತಕ್ಕಿಂತ ಹೆಚ್ಚು ಸಿಡಿ ದೃಶ್ಯ ತಟ್ಟೆಗಳಲ್ಲೂ ಅವರು ಪಾತ್ರ ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನ ರಂಗದ ಜನಪ್ರಿಯತೆ ಕುಂಬಳೆಯವರನ್ನು ರಾಜಕೀಯಕ್ಕೆ ಎಳೆದು ತಂದಿತು. ಧರ್ಮಸ್ಥಳ ಮೇಳದಲ್ಲಿರುವಾಗಲೇ ಬಿ.ಜೆ.ಪಿ ಪಕ್ಷದಿಂದ ಕುಂಬ್ಳೆಯವರಿಗೆ ಶಾಸಕ ಸ್ಥಾನಕ್ಕೆ ಟಿಕೇಟ್ ದೊರಕಿದಾಗ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ವಿರೇಂದ್ರ ಹೆಗ್ಗಡೆಯವರಲ್ಲಿ ತಿಳಿಸಲು ಹೋದಾಗ ಖಾವಂದರು "ಹಾಗಾದರೆ , ನೀವಿನ್ನು ಎಮ್ಮೆಲ್ಯೆ" ಎಂದಾಗ ಕುಂಬ್ಳೆಯವರು ಪ್ರಾಸದಲ್ಲಿಯೇ "ಗೆದ್ದರೆ ಎಮ್ಮೆಲ್ಯೆ. ಸೋತರೆ ಪುನಃ ತಮ್ಮಲ್ಲೇ" ಎಂದಿದ್ದರು. ಆ ವರ್ಷ ಅಂದರೆ 1994ರಲ್ಲಿ ಸುರತ್ಕಲ್ ಕ್ಷೇತ್ರದ ಬಿ.ಜೆ.ಪಿ. ಶಾಸಕರಾಗಿ ಆಯ್ಕೆಯಾದ ಅವರು 1998ರ ತನಕ ಕರ್ನಾಟಕದ ವಿಧಾನಸಭೆಯಲ್ಲಿ ತನ್ನ ಸುರತ್ಕಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಮತದಾರರಿಂದಲೇ ನೇರವಾಗಿ ಶಾಸಕರಾಗಿ ಆಯ್ಕೆಯಾದ ಪ್ರಥಮ ಯಕ್ಷಗಾನ ಕಲಾವಿದರು ಕುಂಬ್ಳೆಯವರು ಎಂಬುದು ಗಮನಾರ್ಹ. 2009ರಿಂದ 2012ರ ವರೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. " ಸಂಸ್ಕಾರ ಭಾರತಿ " ಯ ಕರ್ನಾಟಕ ಪ್ರಾಂತ್ಯ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಮೆರಿಕದ ಚಿಕಾಗೋದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಿದ್ದಾರೆ . ಕರ್ನಾಟಕ ರಾಜ್ಯ ಪ್ರಶಸ್ತಿ, ಬೆಹರಿನ್ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಪೇಜಾವರ ವಿಶ್ವೇಶ್ವ ತೀರ್ಥರಿಂದ ಶ್ರೀ ವಿಜಯವಿಠಲ ಪ್ರಶಸ್ತಿ, ಸೋದೆ ಮಠದ ಪರ್ಯಾಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಮೂಡಬಿದಿರೆ ಯಕ್ಷಸಂಗಮ ಪ್ರಶಸ್ತಿ, ಪಾವಂಜೆ ಯಕ್ಷಗಾನ ಸಪ್ತಾಹ ಪ್ರಶಸ್ತಿ ಇತ್ಯಾದಿ ಸಾವಿರಾರು ಮಾನ-ಸಂಮಾನಗಳಿಗೆ ಕುಂಬಳೆಯವರು ಪಾತ್ರರಾಗಿದ್ದಾರೆ. 2007ರಲ್ಲಿ ಡಾ| ಡಿ.ಕೆ. ಚೌಟ ಪ್ರತಿಷ್ಠಾನದಿಂದ ಸುಂದರರಾಯರಿಗೆ ಸಾರ್ವಜನಿಕ ಸಮ್ಮಾನ ಮತ್ತು " ಸುಂದರಕಾಂಡ " ಗ್ರಂಥ ಸಮರ್ಪಣೆಯಾಗಿದೆ . 2008 ರಲ್ಲಿ ಕಾಂತಾವರ ಕನ್ನಡ ಸಂಘದಿಂದ, ಗಣರಾಜ ಕುಂಬ್ಳೆಯವರು " ಮಿಂಚು ಮಾತಿನ ಯಕ್ಷ - ಕುಂಬಳೆ ಸುಂದರ ರಾವ್ " ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಒಂದು ಕಾಲದಲ್ಲಿ "ಪದ್ಮಶ್ರೀ" ಪ್ರಶಸ್ತಿಗೆ ಕುಂಬ್ಳೆಯವರ ಹೆಸರೂ ಕೇಳಿ ಬಂದಿತ್ತು ಎಂಬುದು ಅವರ ಸಾಧನೆ ಹಾಗೂ ಜನಪ್ರಿಯತೆಗೆ ಸಾಕ್ಷಿ. (ಆದರೂ ಕೊನೆ ಘಳಿಗೆಯಲ್ಲಿ ತಪ್ಪಿ ಹೋಯಿತು) ಕುಂಬ್ಳೆಯವರು ತಮ್ಮ ವಯೋಸಹಜವಾದ ಆರೋಗ್ಯ ಸಮಸ್ಯೆಯಿಂದಾಗಿ, ಇತ್ತೀಚೆಗೆ ಯಕ್ಷಗಾನದಲ್ಲಿ ಭಾಗವಹಿಸುತ್ತಿರಲಿಲ್ಲ. 28.07.2018ರ ನಮ್ಮ ಯಕ್ಷಸಂಗಮದ ಕೂಟದ ಪಟ್ಟಾಭಿಷೇಕ ಪ್ರಸಂಗದಲ್ಲಿ ಶ್ರೀರಾಮನ ಅರ್ಥ ಹೇಳಿ ಪ್ರೇಕ್ಷಕರನ್ನು ಸೆಳೆದಿದ್ದರು. ಬಹುಶಃ ಇದೇ ಅವರ ಕೊನೆಯ ಯಕ್ಷಗಾನದ ಅರ್ಥ ಪ್ರಸ್ತುತಿಯಿರಬೇಕು. ಅಂದು ದಿ.ಮಲ್ಪೆ ವಾಸುದೇವ ಸಾಮಗರ ಸಂಮಾನ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನೂ ವಹಿಸಿದ್ದರು. ಕುಂಬ್ಳೆಯವರು ತಮ್ಮ ಸುಪುತ್ರರಾದ ಪ್ರವೀಣ್, ಪ್ರಸನ್ನ , ಮೂವರು ಮಗಳಂದಿರು , ಮೊಮ್ಮಕ್ಕಳು ಸಹಿತ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ. ಕುಂಬ್ಳೆಯವರ ಆತ್ಮಕ್ಕೆ ಸದ್ಗತಿ ದೊರಕಲಿ , ಅವರ ಅಗಲುವಿಕೆಯ ಶೋಕವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಯಕ್ಷಸಂಗಮ - ಮೂಡುಬಿದಿರೆ ಪರವಾಗಿ ಪ್ರಾರ್ಥಿಸುತ್ತೇನೆ. ಕುಂಬ್ಳೆಯವರ ಮೊಮ್ಮಗಳು ದುಬೈಯಿಂದ ನಿನ್ನೆ ರಾತ್ರಿ ಬಂದ ಕಾರಣ, ಕುಂಬ್ಳೆಯವರ ಅಂತ್ಯಸಂಸ್ಕಾರ ಇಂದು ಬೆಳಿಗ್ಗೆ (01.12.2022 ಗುರುವಾರ) ಜರುಗಲಿದೆ. ಎಂದು ಅವರ ಸುಪುತ್ರರಾದ ಪ್ರವೀಣ್ ತಿಳಿಸಿದ್ದಾರೆ .
ಕುಂಬ್ಳೆಯವರು ನನ್ನ ಉತ್ತಮ ಮಿತ್ರರೂ ಹೌದು . ನಾನು ಮಂಗಳೂರಿಗೆ ಹೋದಾಗಲೆಲ್ಲಾ ಕುಂಬ್ಳೆಯವರ ಮನೆಗೆ ಹೋಗಿ ಅವರನ್ನು ಮಾತಾಡಿಸಿ ಬರುತ್ತಿದ್ದೆ. ಮೊನ್ನೆ ಜುಲೈ ತಿಂಗಳಲ್ಲಿ ನಮ್ಮ "ಯಕ್ಷಸಂಗಮ" ತಾಳಮದ್ದಳೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಲು ಮಿತ್ರರಾದ, ನಿವೃತ್ತ ಸಬ್ ಇನ್ಸ್ಪೆಕ್ಟರ್, ರಾಜಾರಾಮ ನಾಗರಕಟ್ಟೆಯವರೊಂದಿಗೆ ಅವರ ಮನೆಗೆ ಹೋಗಿದ್ದೆ . ಆಗ ಸ್ವಲ್ಪ ಅನಾರೋಗ್ಯ ಇದ್ದರೂ, ತುಂಬಾ ವಿನೋದವಾಗಿಯೇ ಮಾತಾಡಿದ್ದರು. ನಾನು ಅವರ ಮನೆಗೆ ಯಾವಾಗಲೂ ಹೋಗಿ ಭೇಟಿಯಾಗುತ್ತಿದ್ದರೂ ತಮಾಷೆಗಾಗಿ " ಕ್ರಿಶ್ಚನ್ ಬಾಬುರವರ ಕಾಲದಲ್ಲಿ ಬಂದ ನೀವು ಇಂದು ಬಂದಿದ್ದೀರಿ " ಎಂದು ಹಾಸ್ಯ ಚಟಾಕಿ ಹಾರಿಸಿದ್ದರು . ಕೊನೆಗೆ " ತಮಾಷೆಗಾಗಿ ಹೇಳಿದ್ದು ಕುಡ್ವರೇ . ನೀವು ಯಾವಾಗಲೂ ಬರುತ್ತೀರಿ . ಆದರೆ ನಾನು ಯಕ್ಷಗಾನ ಕಲಾವಿದ ಹಾಗೂ ಮಾಜಿ ಶಾಸಕನಾದರೂ , ಇತ್ತೀಚೆಗೆ ನನ್ನನ್ನು ಮಾತಾಡಿಸಲು ಅಥವಾ ಭೇಟಿಯಾಗಲು ನೀವು , ಮೂಡುಬಿದಿರೆಯ ಪಾಂಡಿರಾಜ್ ಹಾಗೂ ಒಂದಿಬ್ಬರನ್ನು ಬಿಟ್ಟರೆ, ಯಕ್ಷಗಾನ ಅಭಿಮಾನಿಗಳು ಅಥವಾ ರಾಜಕೀಯ ಪ್ರತಿನಿಧಿಗಳು ಯಾರೂ ಬರುವುದಿಲ್ಲ " ಎಂಬ ಖೇದವನ್ನೂ ವ್ಯಕ್ತಪಡಿಸಿ ನಾಳೆ ನಾನು ನಿಧನರಾದರೆ , ಶೃದ್ಧಾಂಜಲಿ ಸಲ್ಲಿಸಲು ತುಂಬಾ ಮಂದಿ ಇರುತ್ತಾರೆ ಎಂದು ವಿನೋದವಾಗಿಯೇ ನುಡಿದಿದ್ದರು. ಇದನ್ನು ವಿನೋದಕ್ಕಾಗಿ ಹೇಳಿದ್ದರೂ , ಇದು ಅತ್ಯಂತ ವಾಸ್ತವಿಕತೆಯೂ ಹೌದು .
ಎಂ. ಶಾಂತರಾಮ ಕುಡ್ವ*
ಮೂಡಬಿದಿರೆ

