ಶ್ರೀ ಹರಿ ಕೋಟ: ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ -3 ಯಶಸ್ವಿ ಉಡಾವಣೆ ಇಂದು ಮಧ್ಯಾಹ್ನ ನಡೆಯಿತು. ಸಂಪೂರ್ಣ ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ - 3 ತನ್ನ ಪಯಣವನ್ನು ಆರಂಭಿಸಿತು. ಇಂದು ಮಧ್ಯಾಹ್ನ 2.35 ಕೆ ಸರಿಯಾಗಿ ಆಂಧ್ರ ಪ್ರದೇಶದ ಶ್ರೀ ಹರಿ ಕೋಟದಿಂದ ಉಡಾವಣೆ ಮಾಡಲಾಯಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಆಗಸ್ಟ್ 23 ರಂದು ಈ ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳಕ್ಕೆ ತಲುಪಲಿದೆ. ಈಗಾಗಲೇ ಮೂರು ರಾಷ್ಟ್ರಗಳು ಚಂದ್ರನ್ ಅಂಗಳಕ್ಕೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಇಳಿಸಿದ್ದು, ಭಾರತವೂ ಈ ಬಾರಿ ಈ ಪಟ್ಟಿಗೆ ಸೇರಲಿ ಎಂಬುದಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿದೆ.
ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ GSLV Mark - 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಕೂರಿಸಲಾಗಿದೆ. ಚಂದ್ರಯಾನ ಹಲವು ದಿನಗಳ ಪ್ರಯಾಣವಾಗಿದ್ದು, ಆಗಸ್ಟ್ 23 ರ ವರೆಗೆ ಕಾಯಬೇಕಾಗಿದೆ. ಚಂದ್ರಯಾನ - 2. 2019ರಲ್ಲಿ ಕೊನೆಯ ಕ್ಷಣದಲ್ಲಿ ವಿಫಲವಾಗಿತ್ತು. ಈ ಬಾರಿ ಈ ರೀತಿ ಆಗದೆ ಇರಲಿ ಎಂದು ಇಡೀ ದೇಶವೇ ಹಾರೈಸಿದೆ.


