ನಿಜವಾಗಿಯೂ ಮಾತೇ ಬರಲಾಗದಂತಹ ಕ್ಷಣವಿದು. ಒಲಿಂಪಿಕ್ನಂತಹ ಶ್ರೇಷ್ಠ ಟೂರ್ನಿಯಲ್ಲಿ 60 ಕಠಿಣ ಸ್ಪರ್ಧಿಗಳೆದುರು, ನಾಲ್ಕು ದಿನಗಳ ಕಾಲ ನಡೆದ ತೀವ್ರ ಹೋರಾಟದಲ್ಲಿ ಕೊನೆಯ ಕ್ಷಣಗಳವರೆಗೂ ಅಗ್ರ ಮೂರು ಸ್ಥಾನಗಳಲ್ಲಿದ್ದು ಇನ್ನೇನು ಪಂದ್ಯ ಮುಗಿಯುತ್ತದೆ, ನಾಲ್ಕು ದಿನಗಳ ಕಠಿಣ ಪರಿಶ್ರಮಕ್ಕೆ ಪದಕವೊಂದು ಅರ್ಹವಾಗೇ ಒಲಿದು ಬರುತ್ತದೆ ಎಂಬ ಆಶಾಭಾವವಿದ್ದಾಗ ಕೊನೆಯ ಐದು ನಿಮಿಷಗಳ ಅಂತರದಲ್ಲಿ ಸ್ವಲ್ಪ ಹಿನ್ನಡೆಯಾಗಿ ಕೇವಲ ಒಂದು ಪಾಯಿಂಟ್ ಅಂತರದಿಂದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾದಾಗ, ಒಂದು ಕ್ಷಣ ಏನು ಮಾತನಾಡಬೇಕು ಎಂದು ಅರಿಯದೇ ಮೌನಿಯಾಗಿಬಿಡಬೇಕೆನಿಸುತ್ತದೆ.
ಇದು ಈ ಒಲಿಂಪಿಕ್ನಲ್ಲಿ ಪದಕ ಗೆಲ್ಲದಿದ್ದರೂ ಭಾರತದ ಪರವಾಗಿ ಇತಿಹಾಸ ಸೃಷ್ಟಿಸಿದ ನಮ್ಮ ಬೆಂಗಳೂರಿನ ಮಹಿಳಾ ಗಾಲ್ಫರ್ 23ರ ಹರೆಯದ 'ಅದಿತಿ ಅಶೋಕ್' ಕಥೆ.
ಈ ಬಾರಿಯ ಒಲಿಂಪಿಕ್ನಲ್ಲಿ ಗಾಲ್ಫ್ ಕ್ರೀಡೆಯಲ್ಲಿ ಈ ರೀತಿಯ ಸಾಧನೆಯೊಂದು ನಮ್ಮ ಭಾರತದವರಿಂದ ಸಾಧ್ಯ ಎಂದು ಯಾರೊಬ್ಬರೂ ಊಹಿಸಿರಲು ಸಾಧ್ಯವೇ ಇಲ್ಲ. ಅಮೆರಿಕಾ ಖಂಡದಲ್ಲಿರುವಂತೆ ಗಾಲ್ಫ್ ಕ್ರೀಡೆಯನ್ನು ಆನಂದಿಸಿ ನೋಡುವಂತಹ ಅಭಿಮಾನಿ ಬಳಗ ಭಾರತದಲ್ಲಿ ಇಲ್ಲವೇ ಇಲ್ಲ. ನಮ್ಮ ಪಾಲಿಗೆ ಗಾಲ್ಫ್ ಕೇವಲ ಶ್ರೀಮಂತರ ಕ್ರೀಡೆ. ಐಷಾರಾಮಿ ವ್ಯವಸ್ಥೆಗಳಿರೋ ಗಾಲ್ಫ್ ಕೋರ್ಸುಗಳಲ್ಲಿ ಕೇವಲ ವಿಹಾರಕ್ಕೋಸ್ಕರ ಆಡುವ ಕ್ರೀಡೆಗಳಲ್ಲೊಂದು ಅಷ್ಟೇ.
ಅನಿರ್ಬನ್ ಲಾಹಿರಿ ಹಾಗೂ ಜೀವ್ ಮಿಲ್ಕಾ ಸಿಂಗ್ ಹೊರತುಪಡಿಸಿ ಗಾಲ್ಫ್ ಕ್ರೀಡೆಯಲ್ಲಿ ಬೇರೊಬ್ಬ ಭಾರತೀಯರ ಹೆಸರುಗಳು ಜನರಿಗೆ ನೆನಪಾಗೋದು ಕಷ್ಟ ಸಾಧ್ಯವೇ.ಇಂತಹ ಸಮಯದಲ್ಲಿ ಈ 23ರ ಹುಡುಗಿ ಈ ಒಲಿಂಪಿಕ್ನಿಂದ ಜನರ ಗಮನವನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ನಾಲ್ಕು ದಿನದಿಂದ ನಿರತಂರವಾಗಿ ಸ್ಪರ್ಧೆಗಳು ನಡೆಯುತ್ತಿದ್ದರೂ, ಆ ಸ್ಪರ್ಧೆಗಳ ನೇರಪ್ರಸಾರವೂ ಇದ್ದರೂ, ಮೊದಲ ದಿನದಿಂದಲೂ ಅದಿತಿ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದರೂ, ಪದಕದ ನಿರೀಕ್ಷೆಯ ಸಾಲಿನಲ್ಲಿ ಗಾಲ್ಫನ್ನೂ ಗಮನಿಸುತಿದ್ದವರು ಕಡಿಮೆಯೇ. ಯಾವುದೇ ಮನರಂಜನೆಯಿಲ್ಲದ, ರೋಮಾಂಚಕ ಕ್ಷಣಗಳಿಲ್ಲದ ಈ ಕ್ರೀಡೆ ಯಾರಿಗೆ ತಾನೇ ಇಷ್ಟವಾದೀತು.?
ತನ್ನ ಐದನೇ ವಯಸ್ಸಿನಲ್ಲಿಯೇ ಗಾಲ್ಫ್ ಆಡಲು ಶುರುಮಾಡಿದ ಅದಿತಿ 2016ರ ರಿಯೋ ಒಲಿಂಪಿಕ್ಗೆ ಅರ್ಹತೆ ಪಡೆದಾಗ ಆಕೆಗಿನ್ನೂ 18 ವರ್ಷ. ಆ ಒಲಿಂಪಿಕ್ನಲ್ಲಿ ಗಮನಾರ್ಹವೆನಿಸೋ ಸಾಧನೆ ಮಾಡಲು ಆಗದಿದ್ದರೂ 2021ರ ಒಲಿಂಪಿಕ್ನಲ್ಲಿ ಭಾರತದ ಪಾಲಿಗೆ ಇತಿಹಾಸವನ್ನೇ ರಚಿಸಿಬಿಟ್ಟಿದ್ದಾಳೆ. 23ರ ಹರೆಯದ ಅದಿತಿ ಭವಿಷ್ಯದಲ್ಲಿ ಇನ್ನಷ್ಟು ಅವಕಾಶಗಳಿವೆ. ಸಮರ್ಥವಾಗಿ ಎಲ್ಲವನ್ನೂ ಬಳಸಿಕೊಂಡು 'ಟೈಗರ್ ವುಡ್ಸ್' ಮೆರೆದಂತೆ ತಾನೂ ಗಾಲ್ಫಿನಲ್ಲಿ ಮೆರೆಯಬಲ್ಲಳು ಈಕೆ. ನಿಸ್ಸಂದೇಹವಾಗಿ ಇತಿಹಾಸ ರಚಿಸಲು ಈಕೆ ಸಮರ್ಥಳು.
ಇನ್ನೊಂದು ಅದ್ಭುತ ಸಂಗತಿಯೆಂದರೆ ಈ ಒಲಿಂಪಿಕ್ನಲ್ಲಿ ಅದಿತಿಯ ಕ್ಯಾಡ್ಡಿ(ಕೋಚ್,ನಿರ್ವಾಹಕ,ಮ್ಯಾನೇಜರ್)ಆಗಿ ಕಾರ್ಯ ನಿರ್ವಹಿಸಿದ್ದು ಸ್ವತಹ ಆಕೆಯ ತಾಯಿ 'ಮಹೇಶ್ವರಿ'. 2016ರ ರಿಯೋದಲ್ಲಿ ಆಕೆಯ ಕ್ಯಾಡ್ಡಿಯಾಗಿ ಕಾರ್ಯ ನಿರ್ವಹಿಸಿದ್ದು ಆಕೆಯ ತಂದೆ 'ಅಶೋಕ್'. ಅದಿತಿಯ ಸಾಧನೆಗಳ ಹಿಂದೆ ಆಕೆಯ ಪೋಷಕರ ಶ್ರಮ ಹೆಚ್ಚಿನದು.
ಪದಕ ಗೆಲ್ಲದಿದ್ದರೂ ಭಾರತೀಯರ ಹಾಗೂ ವಿಶ್ವ ಗಾಲ್ಫ್ ಶ್ರೇಷ್ಠರ ಪ್ರಶಂಸೆಗೊಳಗಾದ ಅದಿತಿ ನಿಜಕ್ಕೂ ಅಭಿನಂದನಾರ್ಹಳು.
'ಅದಿತಿ ಅಶೋಕ್' ಭಾರತದ ಹೆಮ್ಮೆ🇮🇳🇮🇳🇮🇳
ವರದಿ : ಶ್ರೀ ಬೆಂಗಳೂರು
