ಕೇರಳದಲ್ಲಿ ಕೊರೋನ ಸ್ಪೋಟ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ತೆರಳುವ ಎಲ್ಲಾ ಗಡಿಗಳಲ್ಲಿ ತಪಾಸಣೆ ಕಠಿಣಗಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಪ್ರಯಾಣಿಕರು ಕೊರೋನ ಲಸಿಕೆ ಎರಡೂ ಡೋಸ್ ಪಡೆದಿದ್ದಲ್ಲಿ ಅದರ ಪ್ರಮಾಣ ಪತ್ರ ತೋರಿಸಿದ್ದಲ್ಲಿ ಪ್ರಯಾಣಕ್ಕೆ ಅವಕಾಶ ನೀಡುತ್ತಿದ್ದು, ಒಂದು ಡೋಸ್ ಪಡೆದ ಪ್ರಯಾಣಿಕರು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿದ ಪ್ರಮಾಣ ಪತ್ರ ತೋರಿಸಿದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ.
ಈ ಮದ್ಯೆ ಕೊರೋನ ಕಾರಣದಿಂದ ಉಳಿದ ಮಂಗಳೂರು ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಪದವಿಯ ಪರೀಕ್ಷೆಗಳು ಇಂದಿನಿಂದ ಆರಂಭಗೊಳ್ಳುತ್ತಿದ್ದು ಪರೀಕ್ಷೆಗೆ ತೆರಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪರೀಕ್ಷಾ ಪ್ರವೇಶ ಪತ್ರ ಮತ್ತು ಗುರುತು ಚೀಟಿ ತೋರಿಸಿದಲ್ಲಿ ಪರೀಕ್ಷೆಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.ಸ್ಥಳಕ್ಕೆ ಮಂಗಳೂರು ನಗರ ಪೋಲಿಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪ್ರಯಾಣಿಕರಿಗೆ ಮಾಹಿತಿ ನೀಡಿದರು. ಉಳ್ಳಾಲ ಠಾಣೆಯ ಪೋಲಿಸ್ ನಿರೀಕ್ಷಣಾ ಅಧಿಕಾರಿ ಸಂದೀಪ್ ಅವರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯಿಂದ ಆಗಮಿಸುವ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಬಸ್ ಪ್ರಯಾಣಕ್ಕೂ ಬೇಕು ನೆಗೆಟಿವ್ ಸರ್ಟಿಫಿಕೇಟ್ :
ಕಾಸರಗೋಡು ಕಡೆಯಿಂದ ತಲಪಾಡಿಗೆ ಆಗಮಿಸುವ ಬಸ್ ಪ್ರಯಾಣಿಕರನ್ನು ತಪಾಸಣೆ ನಡೆಸಿ ಆರ್ಟಿಪಿಸಿಆರ್ ಪ್ರಮಾಣ ಪತ್ರ ಅಥವಾ ಕೊರೋನ ಲಸಿಕೆ ಎರಡು ಡೋಸ್ ಪಡೆದ ದಾಖಲೆಗಳು ನೀಡಿದರೆ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ತಲಪಾಡಿ ಗಡಿಯಲ್ಲಿ ಆರ್ಟಿಪಿಸಿಆರ್ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದ್ದು ಆರ್ಟಿಪಿಸಿಆರ್ ಪರೀಕ್ಷೆ ಪ್ರಮಾಣ ಪತ್ರ ಇಲ್ಲದ ಕೆಲವರನ್ನು ವಾಪಾಸು ಕಳಿಸುವ ಪ್ರಸಂಗವು ನಡೆಯಿತು. ಇನ್ನು ಕೆಲವರು ಇಲ್ಲಿಯೇ ಕಾಯುತ್ತಿರುವ ದೃಶ್ಯವು ಕಾಣುತ್ತಿದ್ದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣ ಮಾಡುವ ಪ್ರಯಾಣಿಕರಲ್ಲಿ ಆತಂಕದ ಜೊತೆ ಈ ಗೊಂದಲವೂ ಮೂಡಿದೆ.
ವರದಿ ಮತ್ತು ಚಿತ್ರ : ರತನ್ ಕುಮಾರ್ ಹೊಸಂಗಡಿ
