ದೇಶದಲ್ಲಿ ನೂರು ಕೋಟಿ ಯಶಸ್ವಿ ಲಸಿಕಾಕರಣ | ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸಿದ ಬೇಕಲ ಕೋಟೆ
October 21, 2021
0
ಕಾಸರಗೋಡು: ದೇಶದಲ್ಲಿ ನೂರು ಕೋಟಿ ಯಶಸ್ವಿ ಲಸಿಕಾಕರಣದ ಭಾಗವಾಗಿ ಕಾಸರಗೋಡಿನ ಬೇಕಲ ಕೋಟೆ ದೀಪಾಲಂಕೃತಗೊಂಡು ಕಂಗೊಳಿಸಿದೆ. ಲಸಿಕಾಕರಣದ ಯಶಸ್ಸಿನಲ್ಲಿ ಶ್ರಮಿಸಿದ ವೈದ್ಯರು, ದಾದಿಯರು ಸಹಿತ ಎಲ್ಲರಿಗೂ ಧನ್ಯವಾದ ತಿಳಿಸುವ ನಿಮಿತ್ತ ಈ ವಿಶೇಷ ದೀಪಾಲಂಕಾರವನ್ನು ಮಾಡಲಾಗಿತ್ತು. ರಾಷ್ಟ್ರದ ಎ.ಎಸ್.ಐ ಸ್ಮಾರಕ ಕೇಂದ್ರಗಳು, ಯುನೆಸ್ಕೋ ಪಾರಂಪರಿಕ ತಾಣಗಳು ಸೇರಿದಂತೆ ಒಟ್ಟು ನೂರು ಐತಿಹಾಸಿಕ ಸ್ಥಳಗಳು ತ್ರಿವರ್ಣ ಬಣ್ಣಗಳಲ್ಲಿ ಕಂಗೊಳಿಸಿವೆ. ಪ್ರಾಚೀನ ಸ್ಮಾರಕ ನಲಂದಾ, ತೆಲಂಗಾಣದ ರಾಮಪ್ಪ ದೇಗುಲ ಸಮುಚ್ಚಯಗಳು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕಂಗೊಳಿಸಿವೆ. ಲಸಿಕಾಕರಣದ ಯಶಸ್ಸಿನಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಗಳಾದ ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ಕಾಸರಗೋಡಿನ ಬೇಕಲ ಕೋಟೆಗೆ ಸುಮಾರು ನಾಲ್ಕು ಶತಮಾನಗಳ ಇತಿಹಾಸವಿದ್ದು, ಕೋಟೆಯನ್ನು ಇಕ್ಕೇರಿ ನಾಯಕರು ಕಟ್ಟಿದ್ದರು. ಕೋಟೆಯು ಸಮುದ್ರ ವ್ಯಾಪಾರ ಮತ್ತು ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬೇಕಲ ಕೋಟೆಯಿಂದ ಮಾಲ್ಡೀವ್ಸ್ ದ್ವೀಪಗಳಿಗೂ ಭತ್ತ ಮತ್ತು ಅಕ್ಕಿ ಪದಾರ್ಥಗಳು ರಫ್ತಾಗುತ್ತಿದ್ದ ಕಾಲಘಟ್ಟವಿತ್ತು. ದೂರದ ಅರೇಬಿಯಾಕ್ಕೂ ಇಲ್ಲಿನ ಸಾಂಬಾರ ಪದಾರ್ಥಗಳ ಸಾಗಾಟವಾಗುತ್ತಿತ್ತು. ಇತಿಹಾಸದ ಪುಟಗಳಲ್ಲಿ ಮಹತ್ವದ ಕೇಂದ್ರವಾಗಿದ್ದ ಬೇಕಲ ಕೋಟೆ ಇಂದು ಎ.ಎಸ್.ಐ ಸುಪರ್ದಿಯಲ್ಲಿದ್ದು ದೇಶ ವಿದೇಶಗಳ ಪ್ರವಾಸಿಗರು ಆಗಮಿಸುತ್ತಾರೆ. ಹಲವು ಬಾವಿಗಳು, ಗುಹಾ ಸುರಂಗಗಳಿರುವ ಬೇಕಲ ಕೋಟೆಯಲ್ಲಿ ಇಕ್ಕೇರಿ ನಾಯಕರ ಶಕ್ತಿ ದೇವ ಹನುಮಂತನ ಗುಡಿಯೂ ಇದ್ದು, ನಿತ್ಯ ಪೂಜೆ ಸಲ್ಲುತ್ತದೆ. ಮುಸ್ಸಂಜೆಯಲ್ಲಿ ಕೋಟೆಯಲ್ಲಿ ಲೈಟ್ ಅಂಡ್ ಶೋ ಕಾರ್ಯಕ್ರಮಗಳು ನಡೆಯುತ್ತವೆ ಮಾತ್ರವಲ್ಲ ಆಕರ್ಷಣೀಯವಾಗಿರುತ್ತದೆ.
Tags
