ನವರಾತ್ರಿಯ ಎಂಟನೆಯ ದಿನ :-
"ಚಂದ್ರನ ಹೊಳಪನ್ನು ಹೊಂದಿರುವ ನ್ಯಾಯಯುತಳಾದ ಮಹಾಗೌರಿಯ ಹಿನ್ನಲೆ, ಅವಳ ವೈಶಿಷ್ಟ್ಯತೆ, ಪೌರಾಣಿಕ ಕಥೆಯೊಳಗೆ ಮಹಾಗೌರಿಯ ಪಾತ್ರ ಮತ್ತು ಮಹತ್ವ :-"
ಭಾರತದಲ್ಲಿ ಪ್ರಮುಖವಾಗಿ ಆಚರಿಸುವ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಭತ್ತು ದಿನಗಳ ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಆದರೆ, ಈ ಹಬ್ಬದಲ್ಲಿ ಸಾಮಾನ್ಯವಾಗಿ ಎಲ್ಲರೂ ಪೂಜಿಸುವ ದೇವಿ ಎಂದರೆ ತಾಯಿ ದುರ್ಗಾ ದೇವಿ. ನವ ಎಂದರೆ ಸಂಸ್ಕೃತದಲ್ಲಿ ಒಂಭತ್ತು ಎಂದು ಅರ್ಥ. ಈ ಒಂಭತ್ತು ರಾತ್ರಿಗಳಲ್ಲಿ ದೇವಿಯ ಒಂಭತ್ತು ಅವತಾರಗಳನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಒಂಭತ್ತು ದಿನಗಳಲ್ಲಿ ತಲಾ ಮೂರು ದಿನಗಳಾಗಿ ವಿಂಗಡಿಸಿ, ದುರ್ಗಾದೇವಿ, ಲಕ್ಷ್ಮೀ ದೇವಿ ಹಾಗೂ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎಂಟನೆಯ ದಿನವನ್ನು ಮಹಾಗೌರಿ ದೇವಿಯನ್ನು ಆರಾಧಿಸಲಾಗುತ್ತದೆ. ಇದು ದುರ್ಗಾ ಮಾತೆಯ ಎಂಟನೆಯ ಅವತಾರವೂ ಹೌದು. ಈಕೆಯ ಶಕ್ತಿಯು ಅಮೋಘವಾದದ್ದು ಮತ್ತು ಫಲದಾಯಕವೂ ಆಗಿರುವುದು. ಸರ್ವ ಭಕ್ತರ ಸರ್ವ ಪಾಪಗಳ ನಿವಾರಣೆಗಾಗಿ ಮಹಾಗೌರಿ ದೇವಿಯ ಆರಾಧನೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ದಿನವನ್ನು ಮಹಾ ಅಷ್ಟಮಿ ಅಥವಾ ದುರ್ಗಾಷ್ಟಮಿ ಎಂದು ಕೂಡಾ ಕರೆಯಲಾಗುತ್ತದೆ. ಇಲ್ಲಿ "ಮಹಾ" ಎಂಬ ಪದದ ಅರ್ಥ ಉಜ್ವಲ" ಅಥವಾ "ನ್ಯಾಯಯುತ" ಎಂಬುವುದನ್ನು ಸೂಚಿಸುತ್ತದೆ. ಹಾಗೆಯೇ "ಪ್ರಕಾಶಮಾನವಾದ", "ಸ್ವಚ್ಛ ಮೈಬಣ್ಣ", "ಚಂದ್ರನಂತೆ ಹೊಳಪನ್ನು ಹೊಂದಿರುವುದು". ಇಲ್ಲಿ ಮಹಾಗೌರಿ ಎಂದರೆ, "ಶ್ರೇಷ್ಠವಾದ ಪ್ರಕಾಶಮಾನ" ಎಂದರ್ಥ. ತಾಯಿ ಗೌರಿ ಎಂದರೆ, ದೇವಿ, ಶಕ್ತಿ ಅಥವಾ ದುರ್ಗಾ, ಪಾರ್ವತಿ, ಕಾಳಿ, ಮತ್ತು ಇತರೆ ರೂಪಗಳಲ್ಲಿ ಕಾಣಿಸಿಕೊಳ್ಳುವಳು. ಇವಳು ಆಧ್ಯಾತ್ಮಿಕ ಅನ್ವೇಷಕರನ್ನು ಬೆಳಗಿಸಿ ಅವರಿಗೆ ಮೋಕ್ಷವನ್ನು ನೀಡುವ ಮೂಲಕ ಪುನರ್ಜನ್ಮದ ಭಯವನ್ನು ತೆಗೆದು ಹಾಕುವಳು. ಶ್ವೇತ ವಸ್ತ್ರಧಾರಿಣಿಯಾಗಿರುವ ಮಹಾಗೌರಿಯ ಮುಖವು ಶಾಂತ ಸ್ವಭಾವದ್ದಾಗಿರುತ್ತದೆ. ಆಕೆಯ ಮುಖದಲ್ಲಿ ಚಂದ್ರನ ತೇಜಸ್ಸು ಇರುತ್ತದೆ. ಇವಳು ಸಿಂಹ ಮತ್ತು ಎತ್ತುವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಳು. ನವರಾತ್ರಿಯ ಸಮಯದಲ್ಲಿ ಇವಳ ಆರಾಧನೆಯಿಂದ ಭೂಮಿಗೆ ಬಂದು ಭಕ್ತರನ್ನು ಸಲಹುವಳೆಂಬ ನಂಬಿಕೆ ಇದೆ.
"ಮಹಾಗೌರಿ ದೇವಿಯ ವೈಶಿಷ್ಟ್ಯತೆ :-"
🔥 ನವರಾತ್ರಿಯ ಎಂಟನೆಯ ದಿನವು ಗುಲಾಬಿ ಬಣ್ಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಏಕೆಂದರೆ, ಇದು ಜೀವನದಲ್ಲಿ ಭರವಸೆ, ಆತ್ಮವಿಶ್ವಾಸ ಮತ್ತು ಹೊಸ ಆರಂಭದ ಸಂಕೇತವನ್ನು ಸೂಚಿಸುತ್ತದೆ. ಈ ದಿನದಂದು ಕನ್ಯಾ ಪೂಜೆಯನ್ನು ಕೂಡಾ ನಡೆಸಲಾಗುತ್ತದೆ. ಅಂದರೆ, ಒಂಬತ್ತು ಯುವತಿಯರನ್ನೂ ಮನೆಗೆ ಕರೆತಂದು ಅವರನ್ನು ಅಲಂಕರಿಸಿ ಅವರಿಗೆ ಕೆಲ ಉಡುಗೊರೆಗಳನ್ನು ನೀಡಿ ಕಳುಹಿಸುವುದು ಕೆಲವು ಕಡೆಗಳಲ್ಲಿ ಈಗಲೂ ವಾಡಿಕೆ ಇದೆ. ಏಕೆಂದರೆ, ಈ ಒಂಬತ್ತು ಯುವತಿಯರನ್ನು ದುರ್ಗಾ ಮಾತೆಯ ಒಂಬತ್ತು ಅವತಾರಗಳೆಂದು ಪರಿಗಣಿಸಲಾಗುತ್ತದೆ.
🔥 ಇವಳು ಬಿಳಿ ಬಣ್ಣದ ಸಂಕೇತವಾಗಿದ್ದು, ಬಿಳಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ. ಈಕೆಯ ಹೊಳಪು ಮತ್ತು ತೀವ್ರ ಕಾಂತಿಯಿಂದಾಗಿ ಪಾರ್ವತಿ ದೇವಿಯ ಈ ಅವತಾರವನ್ನು "ಮಹಾಗೌರಿ" ಎಂದು ಬಣ್ಣಿಸಲಾಗುತ್ತದೆ. ಇವಳು ಒಟ್ಟು ನಾಲ್ಕು ಕೈಗಳನ್ನು ಹೊಂದಿದ್ದು ತನ್ನ ಬಲಗೈಯು ಭಯವನ್ನು ನಿವಾರಿಸುವ ಭಂಗಿಯಲ್ಲಿದ್ದು, ಮತ್ತೊಂದು ಬಲಗೈಯುಲ್ಲಿ ತ್ರಿಶೂಲವನ್ನು ಹಿಡಿದಿರುವಳು. ತನ್ನ ಎಡಗೈಯ ಒಂದು ಕೈಯು ತಂಬೂರಿಯನ್ನು ಮತ್ತೊಂದು ಕೈಯನ್ನು ಭಕ್ತರ ಆಶೀರ್ವಾದಕ್ಕೆ ಬಳಸುವಳು.
🔥 ಮಹಾಗೌರಿ ದೇವಿಯು ರಾಹು ಗ್ರಹವನ್ನು ಪ್ರತಿನಿಧಿಸುತ್ತದೆ. ರಾಹುವಿನ ಪೀಡೆಯಿಂದ ಬರುವ ಅಹಿತಕರವಾದ ಘಟನೆಗಳನ್ನು, ಕಾಟಗಳನ್ನು ತಪ್ಪಿಸಿ ಭಕ್ತರಿಗೆ ರಕ್ಷಣೆ ನೀಡಿ ದೀರ್ಘಾಯುಷ್ಯವನ್ನು ನೀಡಿ ಶಾಂತಿಯನ್ನು ಕೊಡುವಳು.
🔥 "ತಪಸ್ಯೇನೆ ಮಹಾನ್ ಗೌರಃ" ಅಂದರೆ "ತೇಜಸ್ಸ"ನ್ನು ಪ್ರಾಪ್ತಮಾಡಿಕೊಂಡವಳೇ "ಮಹಾಗೌರಿ".
🔥 ಮಂತ್ರ ಯೋಗ ಸಮಿಕ್ಷೆಯಲ್ಲಿ "ಸಮಾಧಿ" ಎಂಬ ಪದದ ವ್ಯುತ್ಪತ್ತಿಯನ್ನು "ಸಮ್ + ಆ + ಅಧಿ" ಎಂದು ಹೇಳಲಾಗಿದೆ.
🔥 "ಸಮ್" ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, "ಆ" ಅಂದರೆ "ವರೆಗೆ" ಮತ್ತು "ಧಿ" ಅಂದರೆ "ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು".
🔥 "ಧೀ" ಎಂಬ ಲಹರಿಗಳನ್ನು ಸೂಕ್ಷ್ಮಾತಿ ಸೂಕ್ಷ್ಮ ಶಕ್ತಿ ಲಹರಿಗಳ "ಸಮ್ಯಕ್" ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು "ಸಮಾಧಿ" ಎನ್ನುತ್ತಾರೆ.
🔥 ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ "ತಪಸ್ಯಾ" ಎನ್ನುತ್ತಾರೆ.
🔥 ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ "ಗೌರ" ಅಥವಾ "ತೇಜಸ್ಸು" ಪ್ರಾಪ್ತವಾಗುತ್ತದೆ.
🔥 ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ "ಮಹಾಗೌರಿ".
"ಮಹಾಗೌರಿ ದೇವಿಯ ಪೌರಾಣಿಕ ಕಥೆ :-"
या देवी सर्वभूतेषु माँ महागौरी रूपेण रूपेण्थिता. ಸರ್ವೋತ್ಕೃಷ್ಟ ಸರ್ವೋತ್ಕೃಷ್ಟ ಪ್ರಜ್ಞಾವಸ್ಥೆಯ ಭೋಗಿ॥
ಯಾ ದೇವಿ ಸರ್ವಭೂತೇಷು ಮಾ ಮಹಾಗೌರಿ ರೂಪೇಣ ಸಂಸ್ಥಿತಾ.
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ॥
ಒಂದು ಪುರಾಣದ ಕತೆಯ ಪ್ರಕಾರ, ತಾಯಿ ಗೌರಿಯು ತಪಸ್ಸು ಮಾಡುವಾಗ ಹಸಿದಿದ್ದ ಸಿಂಹವೊಂದು ಆಹಾರ ಅರಸಿ ಗೌರಿ ದೇವಿಯ ಬಳಿ ಬಂತು. ಆದರೆ, ಆಕೆ ತಪಸ್ಸು ಮಾಡುತ್ತಿರುವ ಕಾರಣ ಆ ಸಿಂಹವು ಅಲ್ಲಿಯೇ ಕಾದು ಬಡಕಲಾಯಿತು. ತಾಯಿ ಗೌರಿ ಕಣ್ಣುಬಿಟ್ಟಾಗ ಬಡಕಲಾಗಿದ್ದ ಸಿಂಹವನ್ನು ಕಂಡು ಕರಗಿಹೋದಳು. ನಾನು ತಪಸ್ಸು ಮಾಡುವಾಗ ಈ ಸಿಂಹ ಆಹಾರ ಅರಸಿ ಇಲ್ಲಿಯೇ ಕುಳಿತಿದೆಯಲ್ಲಾ ಎಂದು ನೊಂದು ಸಿಂಹವನ್ನು ತಾಯಿ ಗೌರಿಯು ತನ್ನ ವಾಹವನ್ನಾಗಿ ಮಾಡಿಕೊಂಡಳು. ಹಾಗಾಗಿಯೇ ತಾಯಿ ಗೌರಿಗೆ ಸಿಂಹ ಮತ್ತು ಎತ್ತು ಎರಡೂ ವಾಹನಗಳಾಗಿವೆ.
ಹಾಗೆ ಪೌರಾಣಿಕ ಪುರಾಣಗಳು ಹೇಳುವಂತೆ, ಬಹಳ ಹಿಂದೆಯೇ ತನ್ನ ಪತ್ನಿಯಾದ ಸತಿಯ ಮರಣದಿಂದ ಕಂಗಲಾಗಿದ್ದ ಶಿವನು ಲೌಕಿಕ ವ್ಯವಹಾರಗಳಿಂದ ದೂರವಿರಲು ನಿರ್ಧರಿಸಿ, ಆಳವಾದ ತಪ್ಪಸ್ಸನ್ನಾಚರಿಸಲು ಕಾಡಿಗೆ ಹೋದನು. ಇದೇ ಸಂದರ್ಭದಲ್ಲಿ ಒಮ್ಮೆ ನಾರದರು ಪಾರ್ವತಿ ದೇವಿಯ ಮನೆ ಬಾಗಿಲ ಬಳಿ ಬಂದು ಇವಳ ಹಿಂದಿನ ಜನ್ಮದ ಬಗ್ಗೆ ಎಲ್ಲವನ್ನು ಹೇಳುವಳು.
"ಮಹಾಗೌರಿಯ ಮೂಲದ ಕಥೆ ಹೀಗಿದೆ :-"
ಶುಂಭ ಮತ್ತು ನಿಶುಂಭ ಎಂಬ ರಾಕ್ಷಸರನ್ನು ಕನ್ಯೆ ಅಥವಾ ಅವಿವಾಹಿತ ಪಾರ್ವತಿಯ ರೂಪದಿಂದ ಮಾತ್ರ ಕೊಲ್ಲಬಹುದು. ಆದ್ದರಿಂದ, ಬ್ರಹ್ಮನ ಸಲಹೆಯಂತೆ, ಶಿವನು ತನ್ನ ಚರ್ಮದ ಬಣ್ಣಕ್ಕಾಗಿ ಪಾರ್ವತಿಯನ್ನು ಪದೇಪದೇ ಚುಡಾಯಿಸಿದನು. ಈ ಕೀಟಲೆಗಳಿಂದ ಪಾರ್ವತಿಯು ತಳಮಳಗೊಂಡಳು. ಆದ್ದರಿಂದ ಅವಳು ಬ್ರಹ್ಮದೇವನಿಗೆ ಕಠಿಣವಾದ ತಪಸ್ಸು ಮಾಡಿದಳು. ಇದರಿಂದ ಅವಳು ಒಂದು ಸುಂದರ ಮೈಬಣ್ಣವನ್ನು ಪಡೆಯುತ್ತಾಳೆ. ಬ್ರಹ್ಮನು ಅವಳಿಗೆ ವರದಾನವನ್ನು ನೀಡಲು ತನ್ನ ಅಸಮರ್ಥತೆಯನ್ನು ವಿವರಿಸಿ ಹಾಗೆಯೇ ದೇವತೆಗಳ ಸಂಕಟವನ್ನು ನಿವಾರಿಸಲು ಶುಂಭ ಮತ್ತು ನಿಶುಂಭ ರಾಕ್ಷಸರನ್ನು ಸಂಹರಿಸಲು ವಿನಂತಿಸಿದನು. ಪಾರ್ವತಿ ದೇವಿಯು ಬ್ರಹ್ಮದೇವನ ಮನವಿಯನ್ನು ಒಪ್ಪಿ ಹಿಮಾಲಯದ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೋದಳು. ಪಾರ್ವತಿಯು ಗಂಗಾ ನದಿಗೆ ಪ್ರವೇಶಿಸಿ ಸ್ನಾನ ಮಾಡುವಾಗ ಅವಳ ಕಪ್ಪು ಚರ್ಮವು ಸಂಪೂರ್ಣವಾಗಿ ತೊಳೆದುಹೋಯಿತು. ನಂತರ ಅವಳು ಬಿಳಿ ಬಟ್ಟೆ ಮತ್ತು ಉಡುಪುಗಳನ್ನು ಧರಿಸಿ ಸುಂದರ ಚಿನ್ನದ ಮಹಿಳೆಯಾಗಿ ಹೊರಬಂದಳು. ಇದರಿಂದ ಅವಳು "ಮಹಾಗೌರಿ" ಎಂಬ ಬಿರುದನ್ನು ಪಡೆದಳು. ನಂತರ ಅವಳು ಶುಂಭ ಮತ್ತು ನಿಶುಂಭನ ನಾಶಕ್ಕಾಗಿ ಹಿಮಾಲಯದಲ್ಲಿ ತನ್ನನ್ನು ಪ್ರಾರ್ಥಿಸುತ್ತಿದ್ದ ದೇವರುಗಳ ಮುಂದೆ ಕಾಣಿಸಿಕೊಂಡಳು. ಶುಂಭ ಮತ್ತು ನಿಶುಂಭ ರಾಕ್ಷಸರನ್ನು ಸಮರದಲ್ಲಿ ಸೋಲಿಸಲ್ಪಟ್ಟ ನಂತರ ಅವಳು "ಕಪ್ಪು ಕೌಶಿಕಿ"ಯಂತೆ ಪ್ರತಿಬಿಂಬಿಸಿದಳು. ನಂತರ ಪಾರ್ವತಿಯು ದೇವರ ಮೇಲಿನ ಕರುಣೆಯಿಂದ ಕಪ್ಪು ಬಣ್ಣಕ್ಕೆ ತಿರುಗಿ "ಕಾಳಿಕಾ" ಎಂದು ಕರೆಯಲ್ಪಟ್ಟಳು. ನಂತರ ಅವಳು ಚಂಡಿಯಾಗಿ (ಚಂದ್ರಘಂಟ) ಬದಲಾಗಿ ರಾಕ್ಷಸ ಕುಲದವನಾದ ಧುಮ್ರಲೋಚನನ್ನು ಕೊಂದಳು. ಪಾರ್ವತಿ ದೇವಿಯ ಅವತಾರವಾದ ಚಂಡಿಯ ಮೂರನೆಯ ಕಣ್ಣಿನಿಂದ ಹೊರಬಂದ ಚಾಮುಂಡಾ ದೇವಿಯಿಂದ ಚಂದ ಮತ್ತು ಮುಂಡನನ್ನು ಕೊಲ್ಲಲಾಯಿತು. ಚಂಡಿ ನಂತರ ರಕ್ತಬೀಜ ಮತ್ತು ಅವನ ತದ್ರೂಪುಗಳನ್ನು ಕೊಂದು ಅವರ ರಕ್ತವನ್ನು ಕುಡಿದಳು.
ಹಾಗೆಯೇ ಮತ್ತೊಂದು ಕಥೆಗಳ ಪ್ರಕಾರ, ಪಾರ್ವತಿ ದೇವಿಗೆ ಶಿವನನ್ನು ಒಲಿಸಿಕೊಳ್ಳುವ ಇಚ್ಚೆಯಾಗಿ ತನ್ನೆಲ್ಲಾ ಅರಮನೆಯ ಸೌಕರ್ಯಗಳನ್ನು ತ್ಯಜಿಸಿ ನಂತರ ಶಿವನಂತೆ ತಾನು ಕೂಡಾ ಪರ್ವತಗಳ ಕಾಡಿನಲ್ಲಿ ಬಿರುಗಾಳಿ, ಬರ, ತೀವ್ರ ಶಾಖ ಮತ್ತು ಶೀತದಲ್ಲಿ ಸಾವಿರಾರು ವರ್ಷಗಳ ಕಾಲ ತೀವ್ರ ತಪಸ್ಸು ಮಾಡುವಳು. ಪ್ರಕೃತಿಯ ನಾನಾ ರಭಸಗಳು ಅವಳ ಮೈಬಣ್ಣವನ್ನು ಕಾಲಾನಂತರದಲ್ಲಿ ಕಪ್ಪಾಗಿಸಿತು. ಈ ಸಮಯದಲ್ಲಿ ಇವಳು ಏನನ್ನೂ ಕೂಡಾ ಸೇವಿಸದೇ ಕೇವಲ ಶಿವನ ಧ್ಯಾನದಲ್ಲಿ ಮಗ್ನನಾಗಿದ್ದಳು. ಇವಳ ಘೋರ ರೂಪದ ತಪಸ್ಸಿನ ಪ್ರಭಾವದಿಂದ ಇವಳ ಶರೀರವು ಎಲೆಗಳಿಂದಲೂ, ದೂಳಿನಿಂದಲೂ ಮತ್ತು ಮಣ್ಣಿನಿಂದಲೂ ಆವೃತಗೊಂಡಿತ್ತು. ಇದರಿಂದ ಪಾರ್ವತಿ ದೇವಿಯು ತನ್ನ ಹಿಂದಿನ ಕಾಂತಿಯನ್ನು ಕಳೆದುಕೊಂಡು ದುರ್ಬಲಳಾದಳು. ತದನಂತರ ಆಕೆಯ ಸಮರ್ಪಿತವೆನಿಸಿದ ಘೋರಾತಿಘೋರ ತಪಸ್ಸಿಗೆ ಶಿವನು ಸಂತಸಗೊಂಡು ಅವಳನ್ನು ಮದುವೆಯಾಗಲು ಒಪ್ಪಿದನು. ಆಕೆಯ ದೇಹದಲ್ಲಿ ಘೋರ ತಪಸ್ಸಿನ ಸಮಯದಲ್ಲಿ ಸಂಗ್ರಹವಾಗಿದ್ದ ಕೊಳೆಯನ್ನು ತೊಳೆಯಲು ಅವನು ತನ್ನ ಗಟ್ಟಿಯಾದ ಕೂದಲಿನಿಂದ ಪವಿತ್ರ ಗಂಗೆಯನ್ನು ಬಿಡಿಸಿದನು. ಈ ಪವಿತ್ರವೆನಿಸಿದ ನೀರು ಅವಳ ಮೇಲೆ ಹರಿದು ಅವಳ ಮೈಬಣ್ಣವು ಬಿಳಿಯ ಬಣ್ಣವಾಗಿ ಸ್ಫಟಿಕದಂತೆ ಹೊಳೆಯುವಂತೆ ಮಾಡಿತು. ಅವಳ ಮೊಗವು ಚಂದ್ರನಂತೆ ಶಾಂತತೆಯನ್ನು ಹೊಂದಿತು. ಹೀಗಾಗಿ ಆಕೆಯನ್ನು "ಮಹಾಗೌರಿ" ಅಥವಾ "ಅತ್ಯಂತ ನ್ಯಾಯಯುತ ದೇವತೆ" ಎಂದು ಕರೆಯಲಾಯಿತು. ಶಿವ ಪುರಾಣ ಮತ್ತು ದೇವಿ ಮಹಾತ್ಮೇಗಳಲ್ಲಿ [ ಮಾರ್ಕಂಡೇಯ ಪುರಾಣ ] ಮಹಾಗೌರಿ ದೇವಿಗೆ "ಮಹಾ ಸರಸ್ವತಿ" ಮತ್ತು "ಅಂಬಿಕಾ" ಎಂಬ ಬಿರುದನ್ನು ನೀಡಲಾಗಿದೆ.
"ಮಹಾಗೌರಿ ದೇವಿಯ ಆರಾಧನೆಯ ಮಹತ್ವ :-"
🔥 ಇವಳ ಆರಾಧನೆಯಿಂದ ನಾವು ಪಟ್ಟು ಹಿಡಿದ ಸರ್ವ ಕೆಲಸಗಳ ಮೇಲೆ ದೇವಿಯ ಪ್ರಭಾವ ದೊರಕಲ್ಪಡುವುದು.
🔥 ಇವಳ ಆರಾಧನೆಯು ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿ ನಮ್ಮ ಶಕ್ತಿ ಮತ್ತು ಭರವಸೆಯನ್ನು ರಕ್ಷಿಸುವಳು.
🔥 ಇವಳ ಆರಾಧನೆಯಿಂದ ನಮ್ಮಲ್ಲಿ ಅಡಕವಾಗಿರುವ ಕೆಟ್ಟ ಅಥವಾ ಕೊಳಕಿನ ರೂಪದ ಅಂಶಗಳನ್ನು ಹೊರಹಾಕುವಳು.
🔥 ಇವಳ ಆರಾಧನೆಯು ಒಂದು ದೃಷ್ಟಿಯಲ್ಲಿ ಹೇಳುವುದಾದರೆ, ಇದನ್ನು "ಪವಿತ್ರವಾದ ತಪಸ್ಸು" ಮತ್ತು "ಬೇರೆಯೆಲ್ಲಿಯೂ ದೊರಕದ ದೈವಿಕ ಪ್ರೀತಿ" ಅಥವಾ "ದೈವಿಕ ಅನುಗ್ರಹವಾಗಿರುವುದು". ಇವಳ ಜ್ಞಾನ ಸಾಧನೆಯಿಂದ ನಮ್ಮಲ್ಲಿ ಆಧ್ಯಾತ್ಮಿಕ ಚಿಂತನೆಗಳು ಹುಟ್ಟಲು ಆರಂಭವಾಗುತ್ತದೆ.
🔥 ಇವಳ ಆರಾಧನೆಯು ಮಕ್ಕಳಿಲ್ಲದೆ ಹಂಬಲಿಸುತ್ತಿರುವ ಸಂತಾನ ಹೀನರಿಗೆ ಸಂತಾನ ಭಾಗ್ಯವನ್ನು ಕರುಣಿಸುವಳು.
🔥 ಮಹಾಗೌರಿ ದೇವಿಯ ಆರಾಧನೆಯು ಶುದ್ಧತ್ವದ ಮತ್ತು ಆಂತರಿಕ ಸೌಂದರ್ಯದ ಪ್ರತಿನಿಧಿಯಾಗಿದ್ದು ನಮ್ಮ ಚಿಂತನೆಗಳನ್ನು ಶುದ್ಧೀಕರಿಸಿ ನಮ್ಮನ್ನು ಆಧ್ಯಾತ್ಮಿಕತೆಯೊಳಗಿನ ಜ್ಞಾನವನ್ನು ವೃದ್ಧಿಸುವಳು.
🔥 ಇವಳ ಆರಾಧನೆಯಿಂದ ನಮ್ಮೆಲ್ಲರ ಕಷ್ಟಗಳು ನಿವಾರಣೆಯಾಗಿ ಮನಸ್ಸಿಗೆ ಆನಂದ ಉಂಟಾಗುವುದು ಮತ್ತು ದೈವಿಕ ಚಿಂತನೆಗಳು ಹುಟ್ಟಲು ಆರಂಭವಾಗುತ್ತದೆ.
🔥 ಇವಳ ಆರಾಧನೆಯಿಂದ ದೇವಿಯು ನಮ್ಮ ಮೇಲೆ ಸಹಾನುಭೂತಿ, ಕಾಳಜಿಯ ಮನೋಭಾವನೆಯನ್ನು ತೋರುವಳು.
🔥 ಇವಳ ಆರಾಧನೆಯು ನಮ್ಮಲ್ಲಿ ಬದುಕಿನೊಳಗಿನ ಜ್ಞಾನಮಯ ಸಾಧನೆಗೆ ಪ್ರೇರಣೆ ನೀಡುವುದರ ಜೊತೆಗೆ ಆಧ್ಯಾತ್ಮಿಕತೆಯತ್ತ ಒಲವು ಮೂಡುವಂತೆ ಮಾಡುವಳು.
🔥 ಇವಳ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಕಂಡುಕೊಳ್ಳಬೇಕಾದ ಮಾರ್ಗಗಳನ್ನು ಮತ್ತು ಆ ಮಾರ್ಗಗಳಿಗೆ ಬೇಕಾದ ನಿಖರವಾದ ಜ್ಞಾನವನ್ನು ಒದಗಿಸುವಳು.
🔥 ನಮ್ಮ ಬದುಕಿನಲ್ಲಿ ಎದುರಾಗುವ ಯಾವುದೇ ಸಂಕಷ್ಟಗಳನ್ನು ಮಹಾಗೌರಿ ದೇವಿಯ ಆರಾಧನೆಯಿಂದ ದೇವಿಯು ನಿವಾರಣೆಗೊಳಪಡಿಸಿ ಧರ್ಮೀಯ ಚಿಂತನೆಗಳಿಗೆ ನಮ್ಮ ಬದುಕನ್ನು ಸೀಮಿತಗೊಳಿಸುವಂತೆ ಆಶೀರ್ವದಿಸುವಳು.
ಲೇಖನ ಮತ್ತು ಸಂಗ್ರಹ : ಶ್ರೀ ಬೆಂಗಳೂರು
