ಮಂಜೇಶ್ವರ:- ಕೇರಳದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಿದೆ ಎಂಬ ನೆಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶದಲ್ಲಿ ಇಂದಿನಿಂದ ಬಿಗು ತಪಾಸಣೆಯನ್ನ ಆರಂಭಿಸಿದೆ. ಜಿಲ್ಲೆಯ ತಲಪಾಡಿ, ಸಾರಡ್ಕ, ನೆಟ್ಟಣಿಗೆ, ಜಾಲ್ಸುರು, ಎಂಬ ಕಡೆಗಳಲ್ಲಿ ಇಂದು ಬೆಳಗಿನಿಂದ ತಪಾಸಣೆ ಆರಂಭಗೊಂಡಿದೆ. ಮೇಲಿನ 4 ಕಡೆಗಳಲ್ಲಿ ಕೂಡಾ ಕರ್ನಾಟಕದ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಈ ಮೇಲಿನ 4 ಕಡೆಯ ಗಡಿಗಳಲ್ಲಿ ತಪಾಸಣೆ ನಡೆಸಿ ಜನರನ್ನ ದಕ್ಷಿಣ ಕನ್ನಡ ಜಿಲ್ಲೆಗೆ ಬಿಡುತ್ತಿದ್ದು, ಉಳಿದ ಎಲ್ಲಾ ಗಡಿಗಳನ್ನು ಇಂದು ಸಂಜೆಯ ಒಳಗೆ ಮುಚ್ಚಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರನ್ ತಿಳಿಸಿದ್ದಾರೆ.
ತಲಪಾಡಿಯಲ್ಲಿ ಕೋವಿಡ್ ಆರೋಗ್ಯ ತಪಾಸಣೆ ಕೇಂದ್ರ ಇಂದು ಬೆಳಗಿನಿಂದ ಆರಂಭಗೊಂಡಿದ್ದು, ಇಂದು ಬಸ್ ಯಾತ್ರೆ ಹೊರತುಪಡಿಸಿ ಖಾಸಗಿ ವಾಹನಗಳಲ್ಲಿ ಕರ್ನಾಟಕಕ್ಕೆ ತೆರಳುವವರ ಗಂಟಲು ದ್ರವ ತೆಗೆದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು, ತಪಾಸಣೆ ನಡೆಸಿ, ಕೋವಿಡ್ ರೋಗವಿದ್ದರೆ ಕೂಡಲೇ ಕಾಲ್ ಕರೆ ಮಾಡಿ ತಿಳಿಸುವರು. ಇಲ್ಲದೇ ಇದ್ದರೆ 2 ದಿನದಲ್ಲಿ ತಮ್ಮ ತಮ್ಮ ಮೊಬೈಲ್ ಗೆ ನೆಗಟಿವ್ ವರದಿ ಮೆಸೇಜ್ ಮೂಲಕ ಕಳುಹಿಸುವರು. ಇದೆ ನೆಗಟಿವ್ ವರದಿಯನ್ನು 15 ದಿನ ಯಾತ್ರೆಯ ವೇಳೆ ತೋರಿಸಿದಲ್ಲಿ ನಿತ್ಯ ಪ್ರಯಾಣ ಬೆಳೆಸಬಹುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ನಾಳೆಯಿಂದ ಕರ್ನಾಟಕ ಪ್ರವೇಶಿಸುವ ಎಲ್ಲರಿಗೂ ಕೋವಿಡ್ ಪ್ರಮಾಣ ಪತ್ರ ಕಡ್ಡಾಯವಾಗಿದೆ ಎಂದು ಮಂಗಳೂರು ಜಿಲ್ಲಾಡಳಿತ ತಿಳಿಸಿದೆ. ಇಂದು ಬೆಳಗ್ಗೆ ತಲಪಾಡಿ ತಪಾಸಣಾ ಕೇಂದ್ರದಲ್ಲಿ ಪತ್ರಕರ್ತರ ಹಾಗೂ ಪೊಲೀಸರ ನಡುವೆ ಕೂಡಾ ವಾಗ್ವಾದ ಕೂಡಾ ನಡೆದಿತ್ತು ಬಳಿಕ ಶಾಂತವಾಯಿತು. ಇದೇ ವೇಳೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕಾಂಗ್ರೆಸ್ ನ ಹರ್ಷಾದ್ ವರ್ಕಾಡಿ, ಮುಸ್ಲಿಂ ಲೀಗ್ ನ ಎ.ಕೆ.ಎಂ. ಅಶ್ರಫ್, ಮುಸ್ತಫಾ ಉದ್ಯಾವರ, ಬಶೀರ್ ಕನಿಲ, ಎಸ್.ಡಿ.ಪಿ.ಐ ಯ ಅಶ್ರಫ್ ಬಡಾಜೆ, ನೇತೃತ್ವದಲ್ಲಿ ಸುಮಾರು 40 ರಷ್ಟು ಮಂದಿ ಕೋವಿಡ್ ತಪಾಸಣೆ ಕೇಂದ್ರದ ಮುಂಭಾಗ ಹಾಗೂ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಬರುವ ವಾಹನಗಳನ್ನ ತಡೆದು ನಿಲ್ಲಿಸಿ, ಕರ್ನಾಟಕ ಸರಕಾರದ ವಿರುದ್ಧ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸಿದರು.
ಅಲ್ಲದೆ ಕರ್ನಾಟಕ ರಾಜ್ಯವು ಕೇರಳದಿಂದ ಬರುವ ಯಾತ್ರಿಕರನ್ನ ಕೋವಿಡ್ ನ ನೆಪದಲ್ಲಿ ಟೆಸ್ಟ್ ಮಾಡಿಸುತ್ತಿದ್ದು, ಕರ್ನಾಟಕದಿಂದ ಕೇರಳಕ್ಕೆ ಬರುವ ಯಾತ್ರಿಕರಿಗೆ ಯಾವ ಆಜ್ಞೆ ಕೂಡ ಮಾಡಿಲ್ಲ. ಇಂದು ಸಂಜೆಯ ಒಳಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡ "ಕೋವಿಡ್ ಟೆಸ್ಟ್" ತಪಾಸಣೆ ಕ್ರಮವನ್ನ ಹಿಂತೆಗೆದುಕೊಳ್ಳದಿದ್ದಲ್ಲಿ ನಾಳೆ ಬೆಳಗ್ಗೆ ತೀವ್ರತರದ ಪ್ರತಿಭಟನೆ ನಡೆಸಲಾಗುವುದು. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸ್ಥಳಕ್ಕೆ ಬರದೆ ಪ್ರತಿಭಟನೆ ಹಿಂತೆಗೆಯಲಾಗುವುದಿಲ್ಲ. ಮಂಗಳೂರು ನಿಂದ ಕೇರಳ ಪ್ರವೇಶಿಸುವ ಎಲ್ಲಾ ವಾಹನವನ್ನ ತಡೆ ಇಡಿಯಲಾಗುವುದೆಂದು ತಿಳಿಸಿದ್ದಾರೆ.
