ಅದೊಂದು ಕಾಲವಿತ್ತು ಊರೆಲ್ಲಾ ಹಬ್ಬ-ಹರಿದಿನಗಳ ಕಾಲ. ಮನೆಮಂದಿ ಎಲ್ಲರೂ ಜೊತೆ ಕುಳಿತು ಹರಟೆ ಮಾಡೋ ಸಮಯ. ನಾ ಮುಂದು ತಾ ಮುಂದು ಎಂದು ಮನೆಯಲ್ಲ ಶೃಂಗಾರ ಮಾಡಿ ಎಲ್ಲಾ ಮನೆಯ ಸದಸ್ಯರು ಜೊತೆಗೂಡಿ ಅಡುಗೆ ಮಾಡಿ, ಅದರಲ್ಲಿ ಏನಾದರೂ ರುಚಿ ಹೆಚ್ಚು ಕಡಿಮೆ ಆಗಿದೆಯೇ ಎಂದು ಹಿರಿಯರಲ್ಲಿ ಕೇಳುವುದು, ಮಡಿಯುಟ್ಟು ಪೂಜೆ ಮಾಡುವುದು, ಹಿರಿಯರ ಆಶೀರ್ವಾದ ಪಡೆದುಕೊಳ್ಳುವುದು, ಸುತ್ತಲೂ ಕುಳಿತು ಊಟ ಮಾಡುವುದು, ಊಟದ ನಂತರ ಎಲೆ ಅಡಿಕೆ ಅಗೆಯುವುದು, ಆಮೇಲೆ ಸಣ್ಣ ಸಣ್ಣ ಆಟಗಳನ್ನು ಆಡುವುದು. ಇವೆಲ್ಲವೂ ಕೂಡು ಕುಟುಂಬದ ಸಂಭ್ರಮದ ಕಥೆಯನ್ನು ಹೇಳುತ್ತದೆ. ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಅತ್ತೆ ಮಾವ, ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಳಿಯಂದಿರು, ಸೊಸೆಯಂದಿರು, ಅಕ್ಕ ತಂಗಿಯರು, ಅಣ್ಣ ತಮ್ಮಂದಿರು, ಭಾವಮೈದುನ ಎಂದು ಹೀಗೆ ಎಲ್ಲರೂ ಒಟ್ಟಾಗಿ ಒಂದೇ ಮನೆಯಲ್ಲಿ ಜೀವನ ನಡೆಸುವ ಕಾಲ.
ಆವಾಗ ಕಷ್ಟಸುಖ ಹಂಚಿಕೊಳ್ಳಲು ಎಲ್ಲರೂ ಇರುತ್ತಿದ್ದರು. ಆ ಮನೆಯಲ್ಲಿ ಬೆಳೆದ ಮಕ್ಕಳಿಗೆ ಗೌರವದಿಂದ ಸಮಾಜವನ್ನು ಎದುರಿಸಲು ತಿಳಿದಿರುತ್ತಿತ್ತು. ಹಿರಿಯರಿಗೆ ಗೌರವ ಕೊಟ್ಟು ನಯ ವಿನಯದ ಮಾತುಗಳನ್ನು ಮೈಗೂಡಿಸಿಕೊಂಡಿದ್ದರು. ಯಾರು ಹಣದ ಹಿಂದೆ ಹೋಗುತ್ತಿರಲಿಲ್ಲ. ಪ್ರೀತಿ ವಿಶ್ವಾಸವೇ ಅವರ ಆಸ್ತಿ ಸಂಪತ್ತು ಆಗಿತ್ತು. ಮನೆಗೆ ಶತ್ರುಗಳು ಬಂದರು ಬೆಲ್ಲ ನೀರು ಕೊಡುವ ಸಂಪ್ರದಾಯವಿತ್ತು. ಅತ್ತೆ-ಸೊಸೆಯ ಸಂಬಂಧವು ತಾಯಿ ಮಗಳ ಹಾಗೆ ಇತ್ತು. ಅಜ್ಜ-ಅಜ್ಜಿ ಮೊಮ್ಮಕ್ಕಳೊಂದಿಗೆ ಕಥೆ ಹೇಳಿ ಸಂತೋಷದ ನಗೆ ಚೆಲ್ಲೋ ಸನ್ನಿವೇಶವೇ ಇರುತ್ತಿತ್ತು. ಪ್ರತಿಯೊಂದು ವಸ್ತುವನ್ನು ಮನೆಮಂದಿ ಎಲ್ಲಾ ಸಮಾನವಾಗಿ ಹಂಚಿ ತಿನ್ನುತ್ತಿದ್ದರು.
ಇಂದಿನ ದಿನಗಳಲ್ಲಿ ಇವೆಲ್ಲಾ ಕೇವಲ ಕಥೆಗಳಾಗಿ ಉಳಿದಿದೆ. ಎಲ್ಲರೂ ಹಣ ಚಿನ್ನಾಭರಣ ಆಸ್ತಿಗೆ ದಾಸರಾಗಿದ್ದಾರೆ. ಹಣ ವಿದ್ದಲ್ಲಿ ಹೆಣವೂ ಬಾಯಿ ಬಿಡುತ್ತಂತೆ. ಸಂಬಂಧಕ್ಕೆ ಬೆಲೆ ಇಲ್ಲ ಮದುವೆಯಾದ ಪ್ರತಿ ಜೋಡಿಯು ಪ್ರತ್ಯೇಕ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಮಕ್ಕಳಿಗೆ ಸಮಾಜದ ಜ್ಞಾನವು ಇರುವುದಿಲ್ಲ. ಅಪ್ಪ ಅಮ್ಮನ ಪ್ರೀತಿ ಇಲ್ಲ. ಎಲ್ಲವೂ ತಂತ್ರಜ್ಞಾನದ ಪ್ರಭಾವ ಅನ್ನಬಹುದು. ಪ್ರತಿಯೊಂದು ವಿಷಯವನ್ನು ಮೊಬೈಲ್ ನೋಡಿ ತಿಳಿಯಬೇಕು. ಆಧುನಿಕತೆಗೆ ಮಾನವ ಮಾರಿ ಹೋಗಿದ್ದಾನೆ. ವೃದ್ಧಾಶ್ರಮ ಎಲ್ಲೆಲ್ಲೂ ತಲೆಯೆತ್ತಿ ನಿಂತಿವೆ. ಮಕ್ಕಳಿಗೂ ವಿದ್ಯಾಭ್ಯಾಸವು ಹಾಸ್ಟೆಲ್ ನಲ್ಲಿ ನಡೆಯುತ್ತದೆ. ಹಣವಿದ್ದರೆ ಎಲ್ಲವೂ ಸಿಗುವ ಕಾಲವಾಗಿದೆ. ಪ್ರೀತಿ ವಿಶ್ವಾಸ ಗಳಿಸಲು ಹಿರಿಯರಿಗೆ ಗೌರವ ಕೊಟ್ಟು ಒಂದೆರಡು ಮಾತನಾಡಲು ಸಮಯವಿಲ್ಲ. "ಕಾಲಾಯ ತಸ್ಮೈ ನಮಃ"
