ಕಣ್ಣಿಗೆ ಕಾಣದ ಕ್ರಿಮಿಯೊಂದು ಮಾನವ ಕುಲವನ್ನೇ ಕಂಗಾಲುಮಾಡಿದೆ. ದೇಶ ಸಂಕಷ್ಟದಲ್ಲಿದೆ. ಸಾವುನೋವುಗಳಿಗೆ ಲೆಕ್ಕವಿಲ್ಲದಂತಾಗಿದೆ. ಈಗ ಪರಿಸ್ಥಿತಿ ಕೊಂಚ ಸುಧಾರಿಸಿದ್ದರೂ, ಕಳೆದ ಕೆಲವು ದಿನಗಳಲ್ಲಿ ನಡೆದ ವಿದ್ಯಾಮಾನಗಳು ಕಂಗೆಡಿಸಿವೆ. ಮಾನವ ಕುಲವೇ ಕೈಚೆಲ್ಲಿ ಕುಳಿತ ಪರಿಸ್ಥಿತಿಯಲ್ಲಿ ಅನೇಕರು ಹೆಣದಮೇಲೆ ಹಣ ಮಾಡುವ ದಂಧೆಗೆ ಇಳಿದಿದ್ದು ಬಹಳ ನೋವಿನ ಸಂಗತಿ.
ಅದು ಆಸ್ಪತ್ರೆಗಳು, ಆಂಬುಲೆನ್ಸ್ , ಸ್ಕ್ಯಾನಿಂಗ್ ಸೆಂಟರ್, ಆಹಾರ ಪದಾರ್ಥಗಳ ಸರಬರಾಜು ಮಾಡುವವರು, ಜೀವ ಉಳಿಸುವ ಔಷಧ ಮಾರುವವರು, ಕಾಯಬೇಕಾದ ಜನಪ್ರತಿನಿಧಿಗಳು... ಹೀಗೆ ಅವಕಾಶ ಸಿಕ್ಕವರೆಲ್ಲಾ ಸುಲಿಗೆಗೆ ನಿಂತುಬಿಟ್ಟಿದ್ದರು.
ಒಂದು ಕಾಲದಲ್ಲಿ ಭಾರತವೆಂದರೆ, ಮಾನವೀಯತೆಯ ತವರಾಗಿತ್ತು. ದಾನ, ಧರ್ಮ, ಕರುಣೆ, ದಯೆ, ಸೇವೆ ಇವೆಲ್ಲಾ ಭಾರತೀಯರ ನರನಾಡಿಗಳಲ್ಲಿ ಬೆರೆತುಹೋಗಿತ್ತು. ಪಾಪ- ಪುಣ್ಯಗಳ ಕಲ್ಪನೆ ಜನಮಾನಸದಲ್ಲಿ ಅಚ್ಚಾಗಿತ್ತು. ವೀರತ್ವವಿತ್ತೇ ಹೊರತು, ಕ್ರೌರ್ಯವಿರಲಿಲ್ಲ. ಒಂದಷ್ಟು ನಕಾರಾತ್ಮಕ ಅಂಶಗಳಿದ್ದರೂ ನಗಣ್ಯವೆನಿಸುವಷ್ಟು ಮಾತ್ರವಿತ್ತು. ಸಂಕಷ್ಟದ ಸಂದರ್ಭಗಳಲ್ಲಿ ಪರಸ್ಪರ ಸಹಕಾರವಿತ್ತು.
ಇವತ್ತು ಇವೆಲ್ಲಾ ಕಳೆದುಹೋದುದೆಲ್ಲಿ ಎಂದು ಹುಡುಕುವಂತಾಗಿದೆ. ಒಂದು ಸಮೃದ್ಧ ಸಂಸ್ಕೃತಿ ಕಾಲಾಂತರದಲ್ಲಿ ಹೀಗೆ ಬದಲಾಗಲು ಕಾರಣವಾಗುವ ಅಂಶಗಳೇನಿರಬಹುದು ಎಂದು ಯೋಚನೆ ಮಾಡಿದರೆ ಬಹುಶಃ ನಮ್ಮ ಶಿಕ್ಷಣ ಮತ್ತು ಮಕ್ಕಳಿಗೆ ನೀಡುತ್ತಿರುವ ಸಾಮಾಜೀಕರಣ ಎನಿಸುತ್ತದೆ.
ಮೌಲ್ಯಾಧಾರಿತ ಶಿಕ್ಷಣವನ್ನು ಬಿಟ್ಟು, ವ್ಯಾಪಾರೀ ದೃಷ್ಟಿಕೋನದ ವಿದೇಶೀ ಶಿಕ್ಷಣ ಪದ್ಧತಿಗೆ ಶರಣಾದುದು, ನಮ್ಮ ನೈತಿಕ ಅದಃಪತನದ ಮೊದಲ ಮೆಟ್ಟಿಲಿರಬೇಕು. ಅದೇ ಶಿಕ್ಷಣ ಕಲಿಸಿದ ಭೌತಿಕ ಜಗತ್ತಿನ ವ್ಯಾಮೋಹ, ಗೆಲುವಿನ ಹಪಹಪಿ ನಮ್ಮ ಮಾನವೀಯತೆಯನ್ನು ಮುಕ್ಕಾಗಿಸುವಷ್ಟು ಬೆಳೆದುನಿಂತಿದೆ. ಇದೇ ಭಾವದಲ್ಲಿ ಮಕ್ಕಳನ್ನು ಬೆಳೆಸಿದುದರ ಪರಿಣಾಮವಾಗಿ, ಈ ತಲೆಮಾರು ಮತ್ತಷ್ಟು ಕ್ರೂರತನವನ್ನು ಮೈಗೂಡಿಸಿಕೊಂಡಿದೆ.
'ಯಾರಿಗೆ ಏನಾದರೆ ನನಗೇನು?' ಎನ್ನುವ ಮನೋಭಾವ ಬೆಳೆಸಿಕೊಂಡು ಗೆಲುವಿನ ಓಟದಲ್ಲಿ ಮೈಮರೆತಿದೆ. 'ಗೆದ್ದು ಹಿಂತಿರುಗಿದಾಗ ಜೊತೆಯಲ್ಲಿ ಯಾರೂ ಇಲ್ಲದಿದ್ದರೆ' ಎಂಬ ಕಿಂಚಿತ್ ಯೋಚನೆಯೂ ಕಾಡದಷ್ಟು ಸ್ವಾರ್ಥ ಆವರಿಸಿಕೊಂಡಿದೆ.
ಶಾಲಾಶಿಕ್ಷಣದಲ್ಲಿ ನೈತಿಕತೆಯ ಅಂಶ ಮರೆಯಾಗಿ, ಕೇವಲ ಮಾಹಿತಿಯನ್ನು ತುಂಬುವ ಕೆಲಸವಾಗುತ್ತಿದೆ ಮತ್ತು ಶಿಕ್ಷಣ ಸಂಸ್ಥೆಗಳು ಹಣ ಮಾಡುವ ವ್ಯಾಪಾರೀ ಕೇಂದ್ರಗಳಾಗಿವೆ. ಇವು ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿಸುತ್ತಿವೆಯೇ ಹೊರತು ಮನುಷ್ಯರನ್ನಾಗಿಸುತ್ತಿಲ್ಲ. ಇಂದು, ಹೆಚ್ಚಾನುಹೆಚ್ಚು ಶಿಕ್ಷಣ ಸಂಸ್ಥೆಗಳ ಒಡೆತನ ರಾಜಕಾರಣಿಗಳಿಗಳದ್ದು ಮತ್ತು ವ್ಯಾಪಾರಿಗಳದ್ದೇ ಎಂಬುದು ಗೊತ್ತಿಲ್ಲದ ವಿಷಯವೇನಲ್ಲ. ಶಿಕ್ಷಣದ ಮಹತ್ವ, ರೀತಿಯನ್ನರಿಯದ ವ್ಯಾಪಾರಿಗಳ ಆಡಳಿತದಲ್ಲಿ ಇನ್ನೆಂತಹ ಶಿಕ್ಷಣವನ್ನು ನಿರೀಕ್ಷಿಸಲಾದೀತು. ಜಿದ್ದಿಗೆ ಬಿದ್ದವರಂತೆ ಅಂಕಗಳಿಸುವ ಯಂತ್ರಗಳ ತಯಾರಿಕೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಹೊರಟಿದ್ದಾರೆ. ಶಿಕ್ಷಣ ದುಬಾರಿಯಾದಂತೆಲ್ಲ, ಅದಕ್ಕೆ ಹಾಕಿದ ಹಣವನ್ನು ಹಿಂದಿರುಗಿಪಡೆವ ಅನಿವಾರ್ಯತೆಯೂ ಸೃಷ್ಟಿ ಯಾಯಿತೇನೊ. ಪರಿಣಾಮವಾಗಿ ಶಿಕ್ಷಿತರೇ ಶೋಷಣೆಗೆ ನಿಂತುಬಿಟ್ಟಂತಿದೆ.
ಇದರಹೊಣೆ ನೇರವಾಗಿ ಪ್ರಭುತ್ವದ್ದೇ. ಪ್ರತಿ ಮಗುವಿಗೂ ಉಚಿತ ಶಿಕ್ಷಣ, ಅರ್ಹರಿಗೆ ಉತ್ತಮ ಅವಕಾಶ ನೀಡಿದ್ದರೆ ಈ ಮಟ್ಟದ ಅವ್ಯವಸ್ಥೆ ಆಗುತ್ತಿರಲಿಲ್ಲವೇನೋ.
ಈ ಮಧ್ಯದೆಲ್ಲೆಲ್ಲೋ ಎದ್ದ ನೈತಿಕ ಶಿಕ್ಷಣದ ಕೂಗನ್ನು ಸಮರ್ಥವಾಗಿ ಅದುಮಲಾಯಿತು. ಆಧುನಿಕತೆಯ ಹೆಸರಿನಲ್ಲಿ ಭಾರತೀಯವಾದುದನ್ನೆಲ್ಲ ನಿರಾಕರಿಸಲು ನಿಂತವರ ಧ್ವನಿ ಜೋರಾಗಿ, ನಮ್ಮ ಮಕ್ಕಳು ಈ ಶಿಕ್ಷಣದಿಂದ ವಂಚಿತರಾದರು. ಪಾಪಪುಣ್ಯ, ದೈವಭಕ್ತಿ ಇವೆಲ್ಲಾ ಕಲ್ಪನೆಗಳೇ ಆದರೂ, ಮನುಷ್ಯನ ವರ್ತನೆಗಳಿಗೆ ಕಡಿವಾಣವನ್ನಂತೂ ಹಾಕುತ್ತಿದ್ದವು. ಈಗ ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಕೋನವೆಂಬ ಹೆಸರಲ್ಲಿ ಪ್ರಶ್ನಿಸಲಾಗುತ್ತದೆ. ಆದರೆ, ಶುದ್ಧ ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ಪರ್ಯಾಯವನ್ನು ಯಾರೂ ಸೂಚಿಸುತ್ತಿಲ್ಲ. ಅಂತಿಮವಾಗಿ, ನೈತಿಕತೆಯನ್ನು ಮರೆತ ಕ್ರೂರ ಸಮಾಜವೊಂದರ ಸೃಷ್ಟಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಮತ್ತಷ್ಟು ಹೆಚ್ಚಾದೀತು.
ಇವುಗಳ ಮಧ್ಯೆಯೂ, ಮನವೀಯತೆಯ ಅತ್ಯುನ್ನತ ಸಾಕ್ಷಿಗಳೂ ಈ ಸಂದರ್ಭದಲ್ಲೇ ಕಾಣಿಸಿದ್ದು, ನಾಡಿನ ಅಂತಃಶಕ್ತಿಗೆ ಸಾಕ್ಷಿಯಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು, ಭಾರತೀಯ ಶಿಕ್ಷಣ ಪದ್ದತಿಯ ಅಡಿಪಾಯದ ಮೇಲೆ ಆಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡರೆ ಖಂಡಿತಾ ಭವ್ಯ ಭವಿಷ್ಯ ನಮ್ಮದಾದೀತು.
ಲೇಖನ : ಶ್ರೀ ಬೆಂಗಳೂರು
