ಮಂಜೇಶ್ವರ : ಮಂಗಳೂರು ವಿಶ್ವವಿದ್ಯಾಲಯದ ಪದವಿ, ಸ್ನಾತಕ ಪದವಿಗಳ ಪರೀಕ್ಷೆಗಳು ಕೊರೋನ ಮತ್ತು ಲಾಕ್ಡೌನ್ ನ ಕಾರಣದಿಂದಾಗಿ ಬಾಕಿ ಉಳಿದಿದ್ದು 1,3,5 ನೇ ಸೆಮಿಸ್ಟರ್ ಪರೀಕ್ಷೆಗಳು ನಾಳೆಯಿಂದ ಈ ತಿಂಗಳ 17 ರವರೆಗೆ ನಡೆಯಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ನಾಳೆ 1 ಮತ್ತು 3 ನೇ ಸೆಮಿಸ್ಟರ್ನವರಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮತ್ತು 5 ನೇ ಸೆಮಿಸ್ಟರ್ನವರಿಗೆ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಪರೀಕ್ಷೆಗಳು ನಡೆಯಲಿದೆ.
ಕಾಸರಗೋಡು ಜಿಲ್ಲೆಯಿಂದ ಈ ಪರೀಕ್ಷೆ ಬರೆಯಲು ಮಂಗಳೂರು, ಪುತ್ತೂರು, ಸುಳ್ಯ, ಬಂಟ್ವಾಳ ಕಾಲೇಜುಗಳಲ್ಲಿ 3000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ,ವಿದ್ಯಾರ್ಥಿನಿಯರಿದ್ದಾರೆ. ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈಗಾಗಲೇ ಹಾಸ್ಟೆಲ್, ಸಂಬಂಧಿಕರ ಮನೆಗಳಲ್ಲಿ ತಂಗಿದ್ದಾರೆ. ಹಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆ ದಿನದಂದೇ ಕಾಸರಗೋಡು ಜಿಲ್ಲೆಯಿಂದ ಬರುವ ಕಾರಣದಿಂದಾಗಿ ನಾಳೆ ಕಾಸರಗೋಡಿನಿಂದ ತಲಪಾಡಿವರೆಗೆ ಮತ್ತು ತಲಪಾಡಿಯಿಂದ ಮಂಗಳೂರಿಗೆ ಬರಲು ಬಸ್ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅಧಿಕಾರಿಗಳು ಮತ್ತು ದಕ್ಷಿಣ ಕನ್ನಡ ಲೀಡ್ ಕಾಲೇಜ್ ಪ್ರಾಂಶುಪಾಲರು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅದೇ ರೀತಿ ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕಾಸರಗೋಡುನಿಂದ ಬರುವ ಎಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಮೊದಲೇ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿದ್ದಲ್ಲಿ ನೇರ ತೆರಳಲು ಅವಕಾಶವಿದ್ದು ಆರ್ಟಿಪಿಸಿಆರ್ ಪರೀಕ್ಷೆ ಮಾಡದವರಿಗೆ ತಲಪಾಡಿ ಗಡಿಯಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಲ್ಲದೇ ಕಾಲೇಜುಗಳಲ್ಲೂ ಅವಕಾಶವಿದ್ದು ಅಲ್ಲಿಯೂ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಎಂದು ಮಂಗಳೂರು ಕಾರ್ಸ್ಟ್ರೀಟ್ನ ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ. ಈ ತಿಂಗಳ 17 ರ ವರೆಗೆ ನಡೆಯುವ ಪರೀಕ್ಷೆಯಲ್ಲಿ ದ್ವಿತೀಯ ವರ್ಷದ ಬಿ.ಸಿ ಎ ವಿದ್ಯಾರ್ಥಿಗಳಿಗೆ 4 ನೇ ತಾರಿಕಿನವರೆಗೆ ಹಾಗೂ ಪ್ರಥಮ ಬಿ.ಕಾಮ್ ವಿದ್ಯಾರ್ಥಿಗಳಿಗೆ 9 ನೇ ತಾರಿಕಿನ ವರೆಗೆ ಪರೀಕ್ಷೆ ನಡೆಯಲಿದೆ. ಉಳಿದವರಿಗೆ ಈ ತಿಂಗಳ 17 ರ ವರೆಗೆ ಪರೀಕ್ಷೆ ನಡೆಯಲಿದ್ದು, ಕೇರಳದಲ್ಲಿ ಕರೊನಾ ಹೆಚ್ಚಳವಾಗುತ್ತಿದ್ದು, ಈ ಸಂದಿಗ್ದ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳು ಇದೀಗ ಕರೊನಾದ ನಡುವೆ ತಮ್ಮ ವಿದ್ಯಾಭ್ಯಾಸ ಜೀವನದ ಪರೀಕ್ಷೆಗೆ ಸಿದ್ಧರಾಗಿದ್ದಾರೆ.


ವರದಿ : ರತನ್ ಕುಮಾರ್ ಹೊಸಂಗಡಿ
