ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾವಲಿಗುಳಿ, ವರ್ಕಾಡಿ ಇದರ ಆಶ್ರಯದಲ್ಲಿ ಇಂದು ಜರಗಿದ 7 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿಯ ವೈಭವದ ವಿಸರ್ಜನಾ ಮೆರವಣಿಗೆ ಇಂದು ಸಂಜೆ ನಡೆಯಿತು. ಬೆಳಗ್ಗೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ದ್ವಾದಶ ನಾಳಿಕೆರ ಗಣಯಾಗ, ಪೂರ್ಣಾಹುತಿ, ಮಧ್ಯಾಹ್ನ ಅಲಂಕಾರ ಪೂಜೆ, ಅನ್ನದಾನ, ಸಂಜೆ 3 ಕ್ಕೆ ಯಾತ್ರಾ ಪೂಜೆ ನಂತರ ವೈಭವದ ಶೋಭಾಯಾತ್ರೆ ನಡೆಯಿತು.
ಕಾರ್ಯಕ್ರಮವು ಕೇರಳ ಕರ್ನಾಟಕ ಗಡಿ ಭಾಗವಾದ ವರ್ಕಾಡಿಯ ಬಾವಳಗುಳಿಯಲ್ಲಿ ನಡೆದ ಕಾರಣ ಗಡಿ ಭಾಗದ ಎರಡು ಕಡೆಯ ಭಕ್ತರು ಶ್ರದ್ದಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶೋಭಾಯಾತ್ರೆಯು ಉತ್ಸಾವಾಂಗಣದಿಂದ ಹೊರಟು ಕೆದುಂಬಾಡಿ, ನೆತ್ತಿಲಪದವು, ಸೈಟ್ ಮೂಲಕ ಬೋಳ ಚರ್ಚ್ ನ ಎದುರುಗಡೆಯಿಂದಾಗಿ ತೌಡುಗೋಳಿಗೆ ತಲುಪಿ ನಂತರ ಸಾಂತಿಪಾಳಿಕೆ ಮಾರಿಗುಡಿ ಬಳಿ ಇರುವ ಕೆರೆಯಲ್ಲಿ ವಿಸರ್ಜಿಸಲಾಯಿತು. ಶೋಭಾಯಾತ್ರೆಯಲ್ಲಿ ಚೆಂಡೆ ಮೇಳ, ನಾಸಿಕ್ ಬ್ಯಾಂಡ್, ತಾಸೆ ಮುಂತಾದ ವಾದ್ಯೋಪಕರಣದಿಂದ ಮೆರವಣಿಗೆಗೆ ಮೆರುಗು ನೀಡಿತ್ತು.
ಮಂಜೇಶ್ವರ ಪೊಲೀಸ್ ಠಾಣೆ ಹಾಗೂ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿಗಳು ವೈಭವದ ವಿಸರ್ಜನಾ ಮೆರವಣಿಗೆಯಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಉತ್ಸವ ಯಶಸ್ವಿಯಾಗಲು ಸಹಕರಿಸಿದ್ದರು.
