ಮಂಜೇಶ್ವರ:- ಕರಿಬೈಲು ಶ್ರೀ ಮಹಾಮಲರಾಯ ದೈವಸ್ಥಾನದ ನವರಾತ್ರಿ ಪೂಜೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇಂದು (ಅ.12) ಸಂಜೆ ನ್ಯಾ. ಯಂ. ದಾಮೋದರ ಶೆಟ್ಟಿ ಸೇವರೂಪವಾಗಿ ನಡೆಸುವ "ಶಾಂಭವಿ ವಿಜಯ" ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಸಂಘಟಕ, ಯಕ್ಷಸಾಧಕ, ಮಾಜಿ ಮಂಜೇಶ್ವರ ಕಂಬಳ ಸಮಿತಿಯ ಅಧ್ಯಕ್ಷರೂ, ಮತ್ತು ಸತತ ಎರಡು ಬಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಅಯ್ಕೆಯಾದ ಮಜಿಬೈಲ್ ನ ಹಿರಿಮೆಯ ಗರಿ ನ್ಯಾ. ಯಂ. ದಾಮೋದರ ಶೆಟ್ಟಿಯವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಇಂದು ಸಂಜೆ ನಡೆಯಲಿದೆ.
ಮಂಜೇಶ್ವರದ ಮೂಡಂಬೈಲು ದಿ. ಲಕ್ಷಣ ಮತ್ತು ದಿ.ತಿಮ್ಮಕ್ಕ ದಂಪತಿಗಳ ಸುಪುತ್ರನಾಗಿ ಜನಿಸಿದ ಶೆಟ್ಟರು ಪ್ರಾಥಮಿಕ ಶಿಕ್ಷಣವನ್ನು ಮೂಡಂಬೈಲ್ ಶಾಲೆ,ಪ್ರೌಡ ಶಿಕ್ಷಣವನ್ನು ಮೀಯಪದವು ಶಾಲೆ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೆನಾರಾ ಕಾಲೇಜು ಉರ್ವ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜಿನಲ್ಲಿ ಪೊರೈಸಿದರು. ಜೀವನ ನಿರ್ವಹಣೆಗಾಗಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ದುಡಿದು ನಂತರ ಕಲಿತಂತಹ ಕಾನೂನು ಪದವಿಯನ್ನು ಸದುಪಯೋಗಪಡಿಸುವ ಉದ್ದೇಶದಿಂದ ವಕೀಲ ವೃತ್ತಿಯನ್ನು ತೊಡಗಿಸಿಕೊಂಡು ಓರ್ವ ಆದರ್ಶ ಕಾನೂನು ತಜ್ಞರಾಗಿ ಸೇವಾ ಕೈಂಕರ್ಯವನ್ನು ಮುಂದುವರಿಸುತ್ತಿದ್ದಾರೆ.
ಯಕ್ಷಗಾನ ಪ್ರವೇಶ
ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿಹೊಂದಿದ್ದ ಇವರು ಕಾಲೇಜು ದಿವಸಗಳಲ್ಲಿ ಯಕ್ಷಗಾನದ ಪ್ರೌಢ ಕಲಾವಿದರಾಗಿ ಗುರಿತಿಸಿಕೊಂಡಿದ್ದಾರೆ. ಉಪ್ಪಳ ದಿ. ಕೃಷ್ಣ ಮಾಸ್ಟರ್ ರವರಿಂದ ಯಕ್ಷಗಾನದ ನಾಟ್ಯವನ್ನು, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಬೆಳಿಂಜ ವೆಂಕಪ್ಪ ರೈಯವರಿಂದ ಭಾಗವತಿಕೆಯನ್ನು ಹಾಗೂ ಪೆರುವಾಯಿ ನಾರಯಣ ಶೆಟ್ಟಿಯವರಿಂದ ಬಣ್ಣಗಾರಿಕೆಯನ್ನು ಕಲಿತರು. ಮುಮ್ಮೇಳ - ಹಿಮ್ಮೇಳ ಪ್ರಾವೀಣ್ಯತೆಯನ್ನು ಪಡೆದು ರಾವಣ, ಅತಿಕಾಯ, ಅರ್ಜುನ, ದೇವೇಂದ್ರ, ಶುಂಭ, ಕಂಸ, ದಶರಥ, ರಕ್ತಬೀಜ, ಇಂದ್ರಜಿತ್, ಕರ್ಣ ಹೀಗೆ ಹತ್ತು ಹಲಾವರು ವೇಷಗಳಿಗೆ ಜೀವ ತುಂಬಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಹಲವಾರು ಅಭಿಮಾನಿಗಳ ತಂಡವನ್ನೆ ರೂಪಿಸಿಕೊಂಡಿದ್ದರೆ. ಉತ್ತಮವಾದ ವಾಕ್ತಚುರ್ಯವನ್ನು ಹೊಂದಿದ್ದ ಶೆಟ್ಟರು ತಾಳಮದ್ದಳೆಯ ಅರ್ಥದಾರಿಯಾಗಿ ಅತಿಕಾಯ, ಕರ್ಣ, ಭೀಷ್ಮ, ರಕ್ತಬೀಜನ ಪಾತ್ರದಲ್ಲಿ ಮಿಂಚಿ ಕಲಾರಸಿಕರ ಮನಗೆದ್ದಿದ್ದಾರೆ.
ಸಂಘ- ಸಂಸ್ಥೆಗಳಲ್ಲಿ ಸಾಧನೆ:
ಇತಿಹಾಸ ಪ್ರಸಿದ್ಧವಾದ ಮಂಜೇಶ್ವರದ ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಮಾಜಿ ಅಧ್ಯಕ್ಷರಾಗಿ , ಕರ್ನಾಟಕ ಸರಕಾರದ ಕರ್ನಾಟ ಯಕ್ಷಗಾನ ಅಕಾಡೆಮಿಯ ಸತತ ಎರಡು ಬಾರಿ ಸದಸ್ಯರಾಗಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ರಾಮಕೃಷ್ಣ ವಿದ್ಯಾಲಯದ ಮಾಜಿ ಕಾರ್ಯದರ್ಶಿ, ಬಂಟ್ಸ್ ಮಜಿಬೈಲ್ ಹಾಗು ಗೆಳೆಯರ ಬಳಗ (ರಿ.) ಬಲ್ಲಂಗುಡೇಲ್ ನ ಗೌರವ ಮಾರ್ಗದರ್ಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ಬಯಲಾಟ ಅಥವಾ ತಾಳಮದ್ದಳೆ ಕೂಟಗಳನ್ನು ಸೇವಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.
ತಾಳಮದ್ದಳೆ ಕೂಟ:
ಶೆಟ್ಟರ ಸೇವರೂಪವಾಗಿ ಪ್ರಸಿದ್ಧ ನುರಿತ ಕಲಾವಿದರ ಕೂಡುವಿಕೆಯಿಂದ ಶಾಂಭವಿ ವಿಜಯ ಯಕ್ಷಗಾನ ತಾಳಮದ್ದಳೆ ಇಂದು (ಅ.12) ಸಾಯಂಕಾಲ 6 ಗಂಟೆಗೆ ಜರಗಲಿದೆ. ಭಾಗವತರಾಗಿ ಬೊಂದೆಲ್ ಸತೀಶ್ ಶೆಟ್ಟಿ, ಕುಳೂರು ಶುಭಾನಂದ ಶೆಟ್ಟಿ, ಚೆಂಡೆ - ಮದ್ದಲೆಯಲ್ಲಿ ರೋಹಿತ್ ಉಚ್ಚಿಲ್,ಕೋಳ್ಯೂರ್ ಭಾಸ್ಕರ, ಪಾತ್ರವರ್ಗದಲ್ಲಿ ಸಾಣೂರು ಮಹೇಶ್ ಕುಮಾರ್,ಯಂ.ದಾಮೋದರ ಶೆಟ್ಟಿ, ಗಣೇಶ್ ಕುಂಜತ್ತೂರು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ,ದೇವಿಪ್ರಸಾದ್ ಶೆಟ್ಟಿ ಬೆಜ್ಜ ಇವರು ಪಾಲ್ಗೊಲ್ಲಲಿದ್ದಾರೆ.
✒️ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಮಜಿಬೈಲು (ದುಬೈ)
