‘ನವರಾತ್ರಿ’ಯಲ್ಲಿ ದುರ್ಗಾದೇವಿಯ ಅಥವಾ ಶಕ್ತಿದೇವತೆಯ ಪೂಜೆಗೆ ವಿಶೇಷವಾದ ಆದ್ಯತೆ. ವಿಶಿಷ್ಠವಾದ ವಿಧಿ-ವಿಧಾನಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ದುಷ್ಟರಾಕ್ಷಸ ಮಹಿಷಾಸುರನ ಮರ್ಧನಕ್ಕಾಗಿ ದೇವಿಯು ಒಂಬತ್ತು ದಿನಗಳ ಕಾಲ ವಿವಿಧ ರೂಪಗಳನ್ನು ತಾಳಿ ಅವನೊಡನೆ ಯುದ್ಧ ಮಾಡಿ ಹತ್ತನೆಯ ದಿನ ವಿಜಯವನ್ನು ಪಡೆದಳು. ಆದ್ದರಿಂದ ಹತ್ತನೆಯ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತಾರೆ. ದೇವಿಯ ದೇವಸ್ಥಾನಗಳಲ್ಲಿ ಒಂದೊಂದು ದಿನವೂ ದೇವಿಗೆ ಒಂದೊಂದು ಅಲಂಕಾರವನ್ನು ಮಾಡಿ ಪ್ರಾರ್ಥಿಸುತ್ತಾರೆ. ಎಲ್ಲಾ ದಿನಗಳಲ್ಲೂ ನಿತ್ಯಪೂಜೆ, ನೈವೇದ್ಯ, ವಿಶೇಷವಾದ ಭೋಜನ ಇತ್ಯಾದಿಗಳು ನಡೆಯುತ್ತವೆ. ಇದರ ಅಂಗವಾಗಿ ಬೊಂಬೆಗಳನ್ನು ಕೂರಿಸಿ ಅಲಂಕರಿಸುವ ಸಂಪ್ರದಾಯವು ಕೆಲವೆಡೆ ಕಂಡು ಬರುತ್ತದೆ. ಪ್ರಥಮ ದಿನದಂದು ಆವಾಹನೆ ಮಾಡಿದ ದುರ್ಗಾದೇವಿ ಮಣ್ಣಿನ ಮೂರ್ತಿಯನ್ನು ದಶಮಿಯ ದಿನದಂದು ವಿಸರ್ಜಿಸಿ ಪರಸ್ಪರ ಬಂಧು-ಮಿತ್ರರೊಂದಿಗೆ ಬನ್ನಿಯ ಪತ್ರವನ್ನು ಕೊಡುವುದರ ಮೂಲಕ ಶುಭ ಕೋರುತ್ತಾರೆ.
ಜಗಜ್ಜನನೀ ದುರ್ಗಾದೇವಿಯ ಮೊದಲನೇ ಸ್ವರೂಪವನ್ನು ‘ಶೈಲಪುತ್ರೀ’ ಎಂದು ತಿಳಿಯಲಾಗುತ್ತದೆ. ಪರ್ವತರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿದ ಕಾರಣ ಶೈಲಪುತ್ರೀ ಎಂಬ ಹೆಸರಾಯಿತು. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಸುಶೋಭಿತವಾಗಿದೆ. ಇವಳೇ ನವದುರ್ಗೆಯರಲ್ಲಿ ಮೊದಲನೆಯವಳಾಗಿದ್ದಾಳೆ.
ಇವಳ ಹಿಂದಿನ ಜನ್ಮದಲ್ಲಿ ಪ್ರಜಾಪತಿ ದಕ್ಷನ ಮಗಳಾಗಿದ್ದಳು. ಆಗ ಅವಳ ಹೆಸರು ‘ಸತಿ’ ಎಂದಿತ್ತು. ಇವಳ ವಿವಾಹವು ಶಂಕರನೊಡನೆ ಆಗಿತ್ತು. ಒಮ್ಮೆ ಪ್ರಜಾಪತಿ ದಕ್ಷನು ಒಂದು ಬಹುದೊಡ್ಡ ಯಜ್ಞ ಮಾಡಿದನು. ಇದರಲ್ಲಿ ಅವನು ಎಲ್ಲ ದೇವತೆಗಳಿಗೆ ತಮ್ಮ ತಮ್ಮ ಯಜ್ಞ ಭಾಗವನ್ನು ಪಡೆಯಲು ಆಮಂತ್ರಿಸಿದ್ದನು. ಆದರೆ ಶಿವನನ್ನು ಈ ಯಜ್ಞದಲ್ಲಿ ಆಮಂತ್ರಿಸಿರಲಿಲ್ಲ. ತನ್ನ ತಂದೆಯು ಒಂದು ವಿಶಾಲ ಯಜ್ಞದ ಅನುಷ್ಠಾನವನ್ನು ಮಾಡುತ್ತಿದ್ದಾನೆ ಎಂದು ಸತಿಯು ಕೇಳಿದಾಗ, ಅವಳ ಮನಸ್ಸು ಅಲ್ಲಿಗೆ ಹೋಗಲು ಉತ್ಸುಕವಾಯಿತು. ತನ್ನ ಈ ಬಯಕೆಯನ್ನು ಶಿವನ ಬಳಿ ತಿಳಿಸಿದಳು. ಎಲ್ಲವನ್ನು ವಿಚಾರಮಾಡಿ ಶಿವನು ಕೊನೆಗೆ ಹೇಳಿದನು, “ಪ್ರಜಾಪತಿ ದಕ್ಷನು ಯಾವುದೋ ಕಾರಣದಿಂದ ನನ್ನಲ್ಲಿ ಸಿಟ್ಟುಗೊಂಡಿರುವನು. ತನ್ನ ಯಜ್ಞದಲ್ಲಿ ಅವನು ಎಲ್ಲ ದೇವತೆಗಳನ್ನು ಆಮಂತ್ರಿಸಿರುವನು. ಅವರ ಯಜ್ಞಭಾಗವನ್ನು ಅವರಿಗೆ ಅರ್ಪಿಸಿರುವನು. ಆದರೆ ನಮ್ಮನ್ನು ಉದ್ದೇಶಪೂರ್ವಕವಾಗಿ ಕರೆಯಲಿಲ್ಲ. ಯಾವುದೇ ಸೂಚನೆಯೂ ಕೊಡಲಿಲ್ಲ. ಇಂತಹ ಸ್ಥಿತಿಯಲ್ಲಿ ನೀನು ಅಲ್ಲಿಗೆ ಹೋಗುವುದು ಯಾವುದೇ ಪ್ರಕಾರದಿಂದ ಶ್ರೇಯಸ್ಕರವಾಗಲಾರದು”. ಶಂಕರನ ಈ ಉಪದೇಶವು ಸತಿಗೆ ರುಚಿಸಲಿಲ್ಲ. ತಂದೆಯ ಯಜ್ಞವನ್ನು ನೋಡಲು, ಅಲ್ಲಿಗೆ ಹೋಗಿ ತಾಯಿ ತಂಗಿಯರನ್ನು ಭೇಟಿಯಾಗಲು ಅವಳಲ್ಲಿ ಉಂಟಾದ ಉತ್ಸಾಹವು ಕಡಿಮೆಯಾಗಲಿಲ್ಲ. ಅವಳ ಪ್ರಬಲ ಆಗ್ರಹವನ್ನು ಕಂಡು ಕೊನೆಗೆ ಭಗವಾನ್ ಶಿವನು ಅವಳಿಗೆ ಅಲ್ಲಿಗೆ ಹೋಗಲು ಅನುಮತಿಯಿತ್ತನು.
ಸತಿಯು ತಂದೆಯ ಮನೆಗೆ ತಲುಪಿ ನೋಡಿದಾಗ ಅವಳನ್ನು ಯಾರೂ ಆದರ ಮತ್ತು ಪ್ರೇಮದಿಂದ ಮಾತನಾಡಿಸಲಿಲ್ಲ. ಎಲ್ಲರೂ ಮುಖ ತಿರುಹುತ್ತಿದ್ದರು. ಕೇವಲ ಅವಳ ತಾಯಿಯು ಪ್ರೀತಿಯಿಂದ ಮಗಳನ್ನು ಅಪ್ಪಿಕೊಂಡಳು. ಅಕ್ಕ-ತಂಗಿಯರ ಮಾತುಗಳಲ್ಲಿ ವ್ಯಂಗ್ಯ-ಹಾಸ್ಯ ಭಾವವೇ ತುಂಬಿತ್ತು. ಬಂಧುಗಳ ಈ ವ್ಯವಹಾರದಿಂದ ಅವಳ ಮನಸ್ಸಿಗೆ ಬಹಳ ದುಃಖವಾಯಿತು. ಅಲ್ಲಿ ಎಲ್ಲೆಡೆ ಭಗವಾನ್ ಶಿವನ ಕುರಿತು ತಿರಸ್ಕಾರದ ಭಾವವೇ ತುಂಬಿರುವುದನ್ನು ಅವಳು ನೋಡಿದಳು. ದಕ್ಷನೂ ಅವಳ ಬಗ್ಗೆ ಕೆಲವು ಅಪಮಾನಕರ ಮಾತನ್ನು ಆಡಿದನು. ಇದೆಲ್ಲವನ್ನೂ ನೋಡಿ ಸತಿಯ ಹೃದಯವು ಕ್ಷೋಭೆ, ದುಃಖ, ಕ್ರೋಧದಿಂದ ಸಂತಪ್ತವಾಯಿತು. ಅವಳು ತನ್ನ ಪತಿಯಾದ ಭಗವಾನ್ ಶಂಕರನ ಈ ಅಪಮಾನವನ್ನು ಸಹಿಸದಾದಳು.
ಭಗವಾನ್ ಶಿವನ ಮಾತನ್ನು ಒಪ್ಪದೇ, ಇಲ್ಲಿಗೆ ಬಂದು ತಾನು ದೊಡ್ಡ ತಪ್ಪು ಮಾಡಿದೆ ಎಂದು ಅವಳಿಗನ್ನಿಸಿತು. ಕೂಡಲೇ ಅವಳು ದಕ್ಷನು ಮಾಡುತ್ತಿದ್ದ ಯಜ್ಞಕುಂಡಕ್ಕೆ ಜಿಗಿದು ಯೋಗಾಗ್ನಿಯಲ್ಲಿ ಸುಟ್ಟು ತನ್ನ ಪ್ರಾಣ ತ್ಯಾಗ ಮಾಡಿದಳು. ವಜ್ರಪಾತದಂತೆ ಈ ದಾರುಣ ದುಃಖದ ಘಟನೆಯನ್ನು ಕೇಳಿ ಶಿವನು ಕ್ಷುದ್ರನಾಗಿ ತನ್ನ ಗಣಗಳನ್ನು ಕಳುಹಿಸಿ ದಕ್ಷನ ಆ ಯಜ್ಞವನ್ನು ಪೂರ್ಣವಾಗಿ ಧ್ವಂಸಗೊಳಿಸಿದನು.
ಸತಿಯು ಯೋಗಾಗ್ನಿಯಿಂದ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನ ಪುತ್ರಿಯ ರೂಪದಲ್ಲಿ ಅವತರಿಸಿದಳು. ಅವಳು ಆಗ ‘ಶೈಲಪುತ್ರೀ' ಎಂದು ಪ್ರಖ್ಯಾತಳಾದಳು. ಪಾರ್ವತೀ, ಹೈಮಾವತೀ ಇವೂ ಅವಳದೇ ಹೆಸರುಗಳಾಗಿವೆ. ಉಪನಿಷತ್ತಿನ ಒಂದು ಕಥೆಯನುಸಾರ ಇವಳೇ ಹೈಮಾವತೀ ರೂಪದಿಂದ ದೇವತೆಗಳ ಗರ್ವವನ್ನು ಕಳೆದಿದ್ದಳು.
‘ಶೈಲಪುತ್ರೀ’ ದೇವಿಯ ವಿವಾಹವೂ ಶಿವನೊಡನೇ ಆಯಿತು. ಹಿಂದಿನ ಜನ್ಮದಂತೆಯೇ ಈ ಜನ್ಮದಲ್ಲಿಯೂ ಅವಳು ಶಿವನ ಅರ್ಧಾಂಗಿನಿಯಾದಳು. ನವದುರ್ಗೆಯರಲ್ಲಿ ಪ್ರಥಮ ಶೈಲಪುತ್ರೀ ದುರ್ಗೆಯ ಮಹತ್ವ ಮತ್ತು ಶಕ್ತಿಗಳು ಅನಂತವಾಗಿವೆ. ನವರಾತ್ರಿಯ ಮೊದಲನೇ ದಿನದ ಪೂಜೆಯಲ್ಲಿ ಇವಳ ಪೂಜೆ-ಉಪಾಸನೆ ಮಾಡಲಾಗುತ್ತದೆ. ಈ ಮೊದಲನೇ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ‘ಮೂಲಾಧಾರ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರ ಯೋಗಸಾಧನೆ ಪ್ರಾರಂಭವಾಗುತ್ತದೆ
ಲೇಖನ : ಶ್ರೀ ಬೆಂಗಳೂರು

🕉️🙏🏻
ReplyDelete