ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಂಡ ದುರಂತದಲ್ಲಿ ಸಿಡಿಎಸ್ ದಂಡನಾಯಕ ಜ.ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿರುವುದು ನಮ್ಮ ದೇಶಕ್ಕೆ ಅಗಾಧ ನಷ್ಟವಾಗಿದೆ, ದೇಶದ ಮೊದಲ ಸಿಡಿಎಸ್ ದಂಡನಾಯಕ ಬಿಪಿನ್ ರಾವತ್ ಅವರು ರಕ್ಷಣಾ ಸುಧಾರಣೆಗಳು ಸೇರಿದಂತೆ ನಮ್ಮ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ವಿವಿಧ ಅಂಶಗಳಲ್ಲಿ ಕೆಲಸ ಮಾಡಿದರು. ಅವರು ಸೈನ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಸೈನ್ಯಕ್ಕೆ ಶ್ರೀಮಂತ ಅನುಭವವನ್ನು ತಂದರು. ಅವರ ಅಸಾಧಾರಣ ಸೇವೆಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ, ಮಾತೃಭೂಮಿಗೆ ಅತ್ಯಂತ ಭಕ್ತಿಯಿಂದ ಸೇವೆ ಸಲ್ಲಿಸಿದ ವೀರ ಸೈನಿಕರಲ್ಲಿ ಒಬ್ಬರಾದ ಅವರ ಅನುಕರಣೀಯ ಕೊಡುಗೆಗಳು ಮತ್ತು ಬದ್ಧತೆಗಳು ಅವಿಸ್ಮರಣೀಯ ಎಂದು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹೇಳಿದ್ದಾರೆ.
ಅವರು ವರ್ಕಾಡಿ ಮುರತ್ತಣೆಯಲ್ಲಿ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ನೇತೃತ್ವದಲ್ಲಿ ಜರುಗಿದ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಸ್ತಫಾ ಕಡಂಬಾರು ಅಧ್ಯಕ್ಷತೆ ವಹಿಸಿದ್ಜ ಕಾರ್ಯಕ್ರಮದಲ್ಲಿ ಅಶ್ರಫ್ ಸ್ವಾಗತಿಸಿದರು. ವರ್ಕಾಡಿ ಪಂ.ಸದಸ್ಯ ರಾಜ್ ಕುಮಾರ್ ಶೆಟ್ಟಿ, ಮಾಜೀ ಸದಸ್ಯರಾದ ಬಿ.ಕೆ.ಮೊಹಮ್ಮದ್ ತುಳಸೀ ಕುಮಾರಿ, ಗಣ್ಯರಾದ ರಾಜೇಶ್ ಮುರತ್ತಣೆ, ಅಬ್ದುಲ್ ರಝಾಕ್ ಹಾಜೀ, ಗೋಪಿನಾಥ್ ,ಜಗದೀಶ್, ಖಾಲಿದ್ , ವಿನೋದ್ ಕುಮಾರ್ ಪಾವೂರು, ಹಸೈನಾರ್, ಶರೀಫ್ ಅರಿಬೈಲು, ಮುಂತಾದವರು ಉಪಸ್ಥಿತರಿದ್ಜರು. ಅರುಣ್ಕುಮಾರ್ ವಂದಿಸಿದರು.
