ಮಂಜೇಶ್ವರ:- ಕ್ಷೇತ್ರದ ಉತ್ಸವದ ಸಿದ್ಧತೆಯಲ್ಲಿ ಪಾಲ್ಗೊಂಡು ಮನೆಗೆ ಮರಳುವ ವೇಳೆ ದಾರಿ ಮಧ್ಯೆ ವ್ಯಕ್ತಿಯೋರ್ವರು ಹೃದಯಾಘಾತಗೊಂಡು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದ ಘಟನೆ ಇಂದು ಅಪರಾಹ್ನ ನಡೆದಿದೆ.
ಅರಿಬೈಲ್ ನಿವಾಸಿ ಮಾಧವ ಅರಿಬೈಲ್ - ದಿ. ರತ್ನಾವತಿ ದಂಪತಿಯ ಪುತ್ರ ಅಚ್ಚುತ್ತ ಅರಿಬೈಲ್ (46) ಮೃತಪಟ್ಟವರಾಗಿದ್ದಾರೆ.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯರಾಗಿರುವ ಅಚ್ಚುತ್ತರವರು ಭಾರತೀಯ ಜನತಾ ಪಕ್ಷದ ಕರ್ಷಕ ಮೋರ್ಚಾ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ, ವಿಶ್ವ ಹಿಂದೂ ಪರಿಷತ್ ವರ್ಕಾಡಿ ಖಂಡ ಸಮಿತಿ ಉಪಾಧ್ಯಕ್ಷರಾಗಿಯೂ, ಪ್ರಸ್ತುತ ಅರಿಬೈಲ್ ಶ್ರೀ ನಾಗಬ್ರಹ್ಮ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಊರ ಗ್ರಾಮ ದೇವರಾದ ಅರಿಬೈಲ್ ಶ್ರೀ ನಾಗಬ್ರಹ್ಮ ದೇವರ ವರ್ಷಾವಾಧಿ ಉತ್ಸವವು ಈ ತಿಂಗಳ 05 ರಂದು ಜರಗಲಿದ್ದು, ಅಂದು ಇತಿಹಾಸ ಪ್ರಸಿದ್ಧ ಅರಿಬೈಲ್ ಕಂಬಳ ಕೂಡ ನಡೆಯಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಪೂಕರೆ ಉತ್ಸವಕ್ಕಾಗಿ ಇತರರ ಜೊತೆ ಇಂದು ಬೆಳಗ್ಗೆ ವರ್ಕಾಡಿ ಬಳಿಯ ಉಜಿರೆಯಿಂದ ಕಂಗು ತರುವ ಕಾರ್ಯಕ್ಕೆ ತೆರಳಿ, ಕ್ಷೇತ್ರಕ್ಕೆ ತಂದೊಪ್ಪಿಸಿ ಬಳಿಕ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಇವರಿಗೆ ಎದೆ ನೋವು ಉಂಟಾಯಿತು. ಕೂಡಲೇ ಮನೆಗೆ ಬಂದು ಬಳಿಕ ಹೊಸಂಗಡಿಯ ಖಾಸಗಿ ಆಸ್ಪತ್ರೆಗೆ ಆಗಮಿಸುವ ವೇಳೆ ಆಸ್ಪತ್ರೆ ಮುಂಭಾಗದಲ್ಲಿ ಕುಸಿದು ಬಿದ್ದರು. ಕೂಡಲೇ ಸ್ಥಳೀಯರು ಎತ್ತಿ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾದರು.
ಬಳಿಕ ಮೃತದೇಹವನ್ನು ಮನೆಗೆ ತರಲಾಯಿತು. ಇಂದು ಸಂಜೆ 6.00 ಗಂಟೆ ವೇಳೆ ಮನೆ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯರಾಗಿರುವ ಅಚ್ಚುತ್ತರವರು ಜನಾನುರಾಗಿದ್ದು, ಊರ ಜನರ ಆತ್ಮಿಯತೆಯನ್ನು ಸಂಪಾದಿಸಿದ್ದರು. ವೃತ್ತಿಯಲ್ಲಿ ಪ್ರಗತಿಪರ ಕೃಷಿಕರಾಗಿರುವ ಅಚ್ಚುತ್ತರವರು ಭಾರತೀಯ ಜನತಾ ಪಕ್ಷದ ಕರ್ಷಕ ಮೋರ್ಚಾದ ವರ್ಕಾಡಿ ಪಂಚಾಯತ್ ನ ಅಧ್ಯಕ್ಷರಾಗಿದ್ದರು, ಕೇಂದ್ರ ಸರಕಾರದ ಕೃಷಿ ಪದ್ದತಿಯ ವಿವಿಧ ಯೋಜನೆಗಳನ್ನು ಕೃಷಿಕರಿಗೆ ತಲುಪಿಸುವಲ್ಲಿ ಅವಿರತವಾಗಿ ಪ್ರಯತ್ನಿಸಿದ್ದರು. ಹಾಗೂ ವಿವಿಧ ಹೋರಾಟಗಳಲ್ಲಿ ಕೂಡಾ ಪಾಲ್ಗೊಂಡಿದ್ದರು.
ಗ್ರಾಮ ದೇವರ ಉತ್ಸವವಾದ ಅರಿಬೈಲ್ ಶ್ರೀ ನಾಗಬ್ರಹ್ಮ ದೇವರ ವರ್ಷಾವದಿ ಉತ್ಸವವು ಇತಿಹಾಸದಲ್ಲಿ ಪ್ರಸಿದ್ಧಿಯನ್ನು ಪಡೆದ ಅರಿಬೈಲ್ ಕಂಬಳದ ಜೊತೆ ನಡೆಯುವುದು ಪಾರಂಪಾರಿಕವಾಗಿ ನಡೆದು ಬರುವ ಕಾರ್ಯಕ್ರಮ. ಈ ವೇಳೆ ಕ್ಷೇತ್ರದ ಅಂಗ ಸಂಸ್ಥೆಯಾದ ಶ್ರೀ ನಾಗಬ್ರಹ್ಮ ಯುವಕ ಮಂಡಲ ಅರಿಬೈಲ್ ವತಿಯಿಂದ ಪ್ರತೀ ವರುಷ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದು, ಈ ಬಾರಿ ಕೂಡಾ ಸಂಸ್ಥೆಯ 37 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ "ಗೀತ ಸಾಹಿತ್ಯ ಸಂಭ್ರಮ" ಎಂಬ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಸಂಸ್ಥೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವಭಾವಿ ತಯಾರಿಯನ್ನು ಕೂಡಾ ತೆರೆ ಮರೆಯಲ್ಲಿ ಅಚ್ಯುತ್ತರು ಮಾಡುತ್ತಿದ್ದರು. ಈ ನಡುವೆ ವಿಧಿ ಅಚ್ಚುತ್ತರಿಗೆ ಈ ರೀತಿ ಬರೆದಿದ್ದು, ಇಡೀ ಊರೇ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ.
ಮೃತರು ತಂದೆ, ಪತ್ನಿ:- ರೇಖಾ, ಮಕ್ಕಳಾದ:- ದೀಕ್ಷಿತ್, ದೀಪ್ತಿಕ್, ಸಹೋದರಿಯರಾದ:- ವಿಶಾಲಾಕ್ಷಿ, ಶೋಭಾ ಹಾಗೂ ಅಪಾರ ಬಂಧು - ಮಿತ್ರರನ್ನು ಅಗಲಿದ್ದಾರೆ.
ಮೃತರ ಮನೆಗೆ ಅರಿಬೈಲ್ ಶ್ರೀ ನಾಗಬ್ರಹ್ಮ ಕ್ಷೇತ್ರದ ಪಧಾಧಿಕಾರಿಗಳು, ಸದಸ್ಯರು, ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿಯ ಜಿಲ್ಲಾ, ಪ್ರಖಂಡ ಹಾಗೂ ಖಂಡ ಸಮಿತಿಯ ಪದಾಧಿಕಾರಿಗಳು, ಬಿಜೆಪಿ, ಕರ್ಷಕ ಮೋರ್ಚಾ, ಓಬಿಸಿ ಮೋರ್ಚಾ, ಯುವಮೋರ್ಚಾ, ಮಹಿಳಾ ಮೋರ್ಚಾ, ಎಸ್.ಸಿ - ಎಸ್. ಟಿ ಮೋರ್ಚಾ ಜಿಲ್ಲಾ, ಮಂಡಲ, ಪಂಚಾಯತ್ ಪಧಾಧಿಕಾರಿಗಳು, ಪಕ್ಷದ ಪ್ರತಿನಿಧಿಗಳು, ಸದಸ್ಯರು ಕಾರ್ಯಕರ್ತರು, ಧಾರ್ಮಿಕ, ವಿವಿಧ ರಾಜಕೀಯ ಪಕ್ಷದ ಮುಖಂಡರು ಭೇಟಿ ನೀಡಿ ಮನೆಯವರನ್ನು ಸಂತೈಸಿದರು.
ಮೃತರ ನಿಧನಕ್ಕೆ ಶ್ರೀ ನಾಗಬ್ರಹ್ಮ ಕ್ಷೇತ್ರ, ಶ್ರೀ ನಾಗಬ್ರಹ್ಮ ಯುವಕ ಮಂಡಲ ಅರಿಬೈಲ್, ಬಿಜೆಪಿ, ಕರ್ಷಕ ಮೋರ್ಚಾ, ಜಿಲ್ಲಾ ಸಮಿತಿ, ಮಂಡಲ ಸಮಿತಿ, ಪಂಚಾಯತ್ ಸಮಿತಿ, ಫ್ರೆಂಡ್ಸ್ ಅರಿಬೈಲ್, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮುರತ್ತನೆ, ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಮುರತ್ತನೆ ಗಾಢವಾದ ಸಂತಾಪ ಸೂಚಿಸಿದ್ದಾರೆ.
ಕಾರ್ಯಕ್ರಮ ರದ್ದು
ಅರಿಬೈಲ್ ಶ್ರೀ ನಾಗಬ್ರಹ್ಮ ದೇವರ ವರ್ಷಾವಧಿ ಉತ್ಸವ, ಹಾಗೂ ಇತಿಹಾಸ ಪ್ರಸಿದ್ಧ ಅರಿಬೈಲ್ ಕಂಬಳದ ಪ್ರಯುಕ್ತ ಶ್ರೀ ನಾಗಬ್ರಹ್ಮ ಯುವಕ ಮಂಡಲ 37 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ಗಂಟೆಗೆ ಆಯೋಜಿಸಿದ್ದ ಶ್ರೀ ವಿಠಲ ನಾಯಕ್ ಕಲ್ಲಡ್ಕ ಇವರ "ಗೀತಾ ಸಾಹಿತ್ಯ ಸಂಭ್ರಮ"ವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಚ್ಚುತ್ತ ಅರಿಬೈಲ್ ರ ಅಕಾಲ ನಿಧನದಂಗವಾಗಿ ರದ್ದು ಗೊಳಿಸಲಾಗಿದೆ. ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ :- ರವೀಂದ್ರ ಶೆಟ್ಟಿ ಅರಿಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
✍️ರತನ್ ಕುಮಾರ್ ಹೊಸಂಗಡಿ.
