ಮಂಜೇಶ್ವರ : ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗವಾದ ಅಂಕೋಲದಲ್ಲಿ ಇಂದು ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾವೂರು ನಿವಾಸಿ ಅಬೂಬಕ್ಕರ್ ಯಾನೆ ಅನ್ಸರ್ (27) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಸ್ನೇಹಿತರಾದ ಮಂಜೇಶ್ವರ ಪಾವೂರು ನಿವಾಸಿ ಅಬೂಬಕ್ಕರ್ ಖಾದರ್ ಎಂಬವರ ಪುತ್ರ ಇಶಾಕ್ ಯಾನೆ ಸಾನು (25) ಹಾಗೂ ಉಪ್ಪಳ ನಿವಾಸಿ ಶರೀಫ್ (25) ಗಂಭೀರ ಗಾಯಗೊಂಡು ಇದೀಗ ಚಿಂತಾಜನಕ ಸ್ಥಿತಿಯಲ್ಲಿ ಕಾರವಾರದ ಖಾಸಗಿ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಇಶಾಕ್ ಹಾಗೂ ಶರೀಫ್ ಇವರು ಉಪ್ಪಳದ ಪೇಟೆಯಲ್ಲಿ ಒಂದು ಗ್ರಾಮ್ ಬಂಗಾರ ಆಭರಣಗಳ ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ.ಅಂಗಡಿಗೆ ಬೇಕಾದ ಕಚ್ಚಾವಸ್ತುವನ್ನು ತರಲೆಂದು ಅಂಕೋಲಕ್ಕೆ ನಿನ್ನೆ ಸಂಜೆ ಉಪ್ಪಳದಿಂದ ಹೊರಟಿದ್ದು ಇಂದು ಮುಂಜಾನೆ ಅಂಕೋಲಕ್ಕೆ ತಲುಪುತ್ತಿದ್ದಂತೆ ಅಂಕೋಲ ಪೋಲಿಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇವರು ಸಂಚರಿಸುತ್ತಿದ್ದ ಕಾರು ಮುಂಭಾಗದಲ್ಲಿ ಸಂಚರಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಲಾರಿಯು ಹಠಾತ್ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಬರುತ್ತಿದ್ದ ಇವರ ಕಾರು ಡಿಕ್ಕಿ ಹೊಡೆದಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇವರ ಜೊತೆ ತೆರಳಿದ್ದ ಅನ್ಸರ್ ಸ್ಥಳದಲ್ಲೇ ಮೃತಪಟ್ಟು ಇಶಾಕ್ ಹಾಗೂ ಶರೀಫ್ ಗಂಭೀರ ಗಾಯಗೊಂಡು ಕಾರವಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಮೃತದೇಹವನ್ನು ಕಾರವಾರದ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು. ವಿಷಯ ತಿಳಿದು ಊರಿನಿಂದ ಸಂಬಂಧಿಕರು, ಸ್ನೇಹಿತರು ತೆರಳಿದ್ದಾರೆ.
