ಬೆಂಗಳೂರು: ಕೇರಳದ ಬದಿಯಡ್ಕ ಸಮೀಪದ ಕೊಡುಗೈ ದಾನಿ, ಆತ್ಮತೃಪ್ತಿಗಾಗಿ ಸಮಾಜಸೇವೆ ಮಾಡುತ್ತಿದ್ದ ಸರಳತೆಯ ಪ್ರತಿರೂಪ, ಕಾರುಣ್ಯ ಮೂರ್ತಿ ಸಾಯಿರಾಂ ಗೋಪಾಲಕೃಷ್ಣ ಭಟ್ ಕಿಳಿಂಗಾರ್ ಅವರ ನಿಧನಕ್ಕೆ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಯಿರಾಂ ಭಟ್ ಅವರು ತಮ್ಮ ಬದುಕನ್ನೇ ದಾನಧರ್ಮಗಳಿಗಾಗಿ ಮೀಸಲಿಟ್ಟವರು. ಸಾಯಿ ಭಕ್ತರಾಗಿದ್ದು ಎಲ್ಲರನ್ನೂ ಬಹಳ ಪ್ರೀತಿಯಿಂದ ಮಾತನಾಡಿಸುವ ಇವರ ಜೀವನರೀತಿ ಅನುಕರಣೀಯವಾದುದು. ಬಡವರ ನೋವÀನ್ನು ದೂರಮಾಡಿ, ನಿರ್ಗತಿಕರ ಪಾಲಿನ ದೇವರಾಗಿ, ನಿರುದ್ಯೋಗಿಗಳ ಬದುಕಿನ ಆಶಾಕಿರಣವಾಗಿದ್ದ ಅವರು, ಬಡಕುಟುಂಬಗಳಿಗೆ ಸುಮಾರು 280ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಟ್ಟವರು ಎಂದು ಅವರು ನೆನಪಿಸಿದ್ದಾರೆ.
ಮಧ್ಯಮ ವರ್ಗದ ಕೃಷಿಕನಾಗಿದ್ದ ಸಾಯಿರಾಂ ಭಟ್ಟರಿಗೆ ಕಾಶಿಯಾತ್ರೆ ಒಂದು ಕನಸಾಗಿತ್ತು. ಆದರೆ 1995ರಲ್ಲಿ ಕಾಶಿ ಯಾತ್ರೆಗೆ ಕೂಡಿಸಿಟ್ಟ ಹಣವನ್ನು ಕುಂಟಿಯಾನನೆಂಬ ದಿಕ್ಕೆಟ್ಟ ನಿರ್ಗತಿಕನ ಕಣ್ಣೀರೊರೆಸಲು ಉಪಯೋಗಿಸುವ ಕಲ್ಪನೆಯೇ ಇರಲಿಲ್ಲ ಅವರಿಗೆ. ಮಳೆಗಾಲದ ಬಿಡದೆ ಸುರಿವ ಮಳೆ, ಗಾಳಿಯ ರಭಸಕ್ಕೆ ಹಾರಿಹೋದ ಸೂರು, ಅಳುತ್ತಾ ನಿಂತಿರುವ ಪುಟ್ಟ ಮಕ್ಕಳು, ಕೇವಲ ಮಡಲು ಕೇಳಲು ಬಂದ ಕುಂಟಿಯಾನನಿಗೆ ಮನೆ ನಿರ್ಮಿಸಿ ಕೊಡಲು ಕಾರಣವಾಯಿತು. ಇದು ಮೊದಲ ವಸತಿದಾನ. ಬಳಿಕ ಅವರ ವಸತಿ ದಾನ ಕಾರ್ಯ ಮುಂದುವರಿದಿದ್ದು, ಸುಮಾರು 280 ದಾಟಿದೆ. ಕಾಶಿ ಯಾತ್ರೆಯ ಕನಸು ಕೈಬಿಟ್ಟ ಭಟ್ಟರು ಈಗ ನೂರಾರು ಕುಟುಂಬಗಳ ಕಣ್ಣೀರೊರೆಸಿ ಕಾಶಿ ಯಾತ್ರೆ ಮುಗಿಸಿದ ಸಂತೃಪಿ ಪಡೆದವರು ಎಂದು ವಿವರಿಸಿದ್ದಾರೆ.
ಮನೆ, ನೀರು, ಉದ್ಯೋಗ, ಚಿಕಿತ್ಸೆ ಎಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಒದಗಿಸುವ ಸಾಯಿರಾಂ ಭಟ್ ಸಾಯಿಭಕ್ತರು. ಅಂತೆಯೇ ಹನುಮಂತನ ಭಕ್ತರೂ ಹೌದು. ಆ ಕಾಲದಲ್ಲಿ 8ನೇ ಕ್ಲಾಸು ಓದಿರುವ ಭಟ್ಟರಿಗೆ ಪೌರೋಹಿತ್ಯ, ನಾಟಿವೈದ್ಯದಲ್ಲಿ ದೀರ್ಘಕಾಲದ ಅನುಭವವಿದೆ. ತಾಲೀಮು ಅಭ್ಯಸಿಸಿ ಸಹಸ್ರಾರು ಶಿಷ್ಯರನ್ನೂ ರೂಪಿಸಿದ್ದಾರೆ. ಸರ್ಕಸ್ ಕಂಪೆನಿಯಲ್ಲಿ ಶ್ರೇಷ್ಠ ಅಭ್ಯಾಸಿ ಎನ್ನುವ ಗೌರವವನ್ನೂ ಪಡೆದಿದ್ದು ದಿನದ ಒಂದು ಭಾಗವನ್ನು ಯೋಗ, ಧ್ಯಾನಕ್ಕೆ ಮೀಸಲಿಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಕೃಷಿಕರೂ ಆಗಿದ್ದ ಇವರ ಪರಿಸರ ಪ್ರೇಮ ಅವರ ಮನೆಯ ಸುತ್ತಮುತ್ತ ಹಚ್ಚಹಸಿರಾಗಿ ನಳನಳಿಸುವ ಗಿಡಮರಬಳ್ಳಿಗಳೇ ಸಾರಿ ಹೇಳುತ್ತವೆ. ಆ ಹಿತ್ತಿಲಲ್ಲಿ ಏನಿದೆ ಏನಿಲ್ಲ ಎಂಬುವಂತಿಲ್ಲ. ಹತ್ತು ಹಲವು ಬಗೆಯ ಹಣ್ಣಿನ ಮರಗಳು, ತರಕಾರಿ ತೋಟ, ಉತ್ತಮೋತ್ತಮ ಗುಣಮಟ್ಟದ ಮರಗಳು, ವಿವಿಧ ರಂಗುರಂಗಿನ ಹೂಗಳ ನೀಡುವ ಗಿಡಗಳು ಅವರ ಕಾಳಜಿಗೆ, ಪರಿಸರ ಪ್ರೇಮಕ್ಕೆ ತಲೆಬಾಗುತ್ತಿವೆ. ಸಾಯಿನಿಲಯಕ್ಕೆ ಬರುವ ಎಲ್ಲರಿಗೂ ಮಾವು ಹಾಗೂ ಹಲಸಿನ ಎರಡು ಗಿಡಗಳನ್ನು ನೀಡುತ್ತಿದ್ದರು ಎಂದು ಸ್ಮರಿಸಿದ್ದಾರೆ.
ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ 10 ನಿಮಿಷ ಮೊದಲೇ ಬಂದು ತಲುಪುತ್ತಿದ್ದÀ ಭಟ್ಟರಿಗೆ ಸಂಘಟಕರು ಕಳುಹಿಸುವ ಐμÁರಾಮಿ ಕಾರಿಗಿಂತ ಅವರೇ ದಾನವಾಗಿ ನೀಡಿದ್ದÀ ಬಾಲಕೃಷ್ಣ ಅವರ ಭಾಗ್ಯಲಕ್ಷ್ಮೀ ಎಂಬ ಆಟೋವೇ ಇಷ್ಟ. ಇವರ ನಿತ್ಯ ಪ್ರಯಾಣ ಇದರಲ್ಲೇ ನಡೆಯುತ್ತಿತ್ತು. ಬದುಕಿನುದ್ದಕ್ಕೂ ಸರಳತೆ ಉಳಿಸಿಕೊಂಡಿದ್ದÀ ಭಟ್ಟರು ಸಜ್ಜನಿಕೆಯ ಪ್ರತಿರೂಪವಾಗಿದ್ದರು ಎಂದು ತಿಳಿಸಿದ್ದಾರೆ.
ಸಾಯಿರಾಂ ಭಟ್ಟರ ಬದುಕೇ ಒಂದು ಪುಸ್ತಕ. ಆ ಮೇರು ವ್ಯಕ್ತಿತ್ವವನ್ನು ಕರ್ನಾಟಕ ಸರಕಾರದ ಪಠ್ಯ ಕ್ರಮದಲ್ಲಿ ಭಟ್ಟರ ಬದುಕು ಕಲಿಕೆ ವಿಷಯವಾಗಿದೆ. ಕಾರುಣ್ಯ ಸೇವೆಯ ಜಾತ್ಯತೀತ ರಾಯಭಾರಿ ಭಟ್ಟರ ಬದುಕನ್ನು ದಾನಗಂಗೆ ಎಂಬ ಪುಸ್ತಕದಲ್ಲಿ ಪತ್ರಕರ್ತ, ಬರಹಗಾರ ರವಿ ನಾಯ್ಕಪು ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಇದಿಷ್ಟೇ ಅಲ್ಲ; ತಮ್ಮ ಊರಿನ ಯುವಕ ಯುವತಿಯರಿಗೆ ಜೀವನಮಾರ್ಗವನ್ನು ತೋರಿಸಿ ಸಾಯಿರಾಂ ಭಟ್ಟರು. ಈಗಾಗಲೇ ನೂರಾರು ಯುವಕರಿಗೆ ಅಟೋ ರಿಕ್ಷಾವನ್ನು ದಾನಮಾಡಿದ್ದರು. ಯುವತಿಯರಿಗೆ ಹೊಲಿಗೆ ಯಂತ್ರವನ್ನು ದಾನವಾಗಿ ನೀಡಿ ಜೀವನಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬದಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ತಮ್ಮ ಮಗನ ನೆರವಿನಿಂದ 11 ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬಡ ಹೆಣ್ಣುಮಕ್ಕಳಿಗೆ ಕಂಕಣ ಭಾಗ್ಯವನ್ನು ನೀಡಿರುವ ಸಾಯಿರಾಂ ಭಟ್ ಅವರು ಹತ್ತಾರು ತರುಣಿಯರ ವಿವಾಹದ ಕನಸನ್ನು ನನಸಾಗಿಸಿದ್ದಾರೆ. ಕಿಳಿಂಗಾರಿನಲ್ಲಿರುವ ಸಾಯಿಮಂದಿರದಲ್ಲಿ ನಡೆಯುವ ವಿವಾಹ ಸಮಾರಂಭಕ್ಕೆ ಚಿನ್ನ, ಬಟ್ಟೆ, ಊಟೋಪಚಾರ ಎಲ್ಲವನ್ನೂ ಉಚಿತವಾಗಿ ನಿರ್ವಹಿಸಿದವರು ಎಂದಿದ್ದಾರೆ.
ಕಿಳಿಂಗಾರಿನ ಅವರದ್ದೇ ಸಾಯಿಮಂದಿರದಲ್ಲಿ ಪ್ರತಿವಾರ ಉಚಿತ ವೈದ್ಯಕೀಯ ಶಿಬಿರವನ್ನೂ ಅವರು ನಡೆಸುತ್ತಿದ್ದರು ಎಂದು ವಿವರಿಸಿದ್ದಾರೆ.
ಮೃತರ ಕುಟುಂಬ, ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ಕರುಣಿಸಲಿ ಎಂದು ನಳಿನ್ಕುಮಾರ್ ಕಟೀಲ್ ಅವರು ಪ್ರಾರ್ಥಿಸಿದ್ದಾರೆ.
