ಪುತ್ತೂರು : ಪುತ್ತೂರು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ, ಹಿರಿಯ ಪತ್ರಕರ್ತ, ಹೊಸದಿಂಗತ ಪತ್ರಿಕೆಯ ವರದಿಗಾರ ಬಿ.ಟಿ. ರಂಜನ್ ಎಂದೇ ಖ್ಯಾತರಾಗಿದ್ದ ಉಪ್ಪಿನಂಗಡಿ ರಥಬೀದಿ ನಿವಾಸಿ ಬಂಟ್ವಾಳ ತೋನ್ಸೆ ಶೆಣೈ (60) ಫೆ. 5 ರಂದು ಬೆಳಿಗ್ಗೆ ಇಹಲೋಕ ತ್ಯಜಿಸಿದರು. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಳೆದ ಎರಡು - ಮೂರು ದಿನಗಳಿಂದ ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ರಂಜನ್ ಅವರಿಗೆ ನಿನ್ನೆ (ಫೆ. 4) ಬೆಳಿಗ್ಗೆಯಿಂದ ಜ್ವರವು ಕಾಣಿಸಿಕೊಂಡು ಆರೋಗ್ಯದಲ್ಲಿ ವಿಪರೀತ ಏರುಪೇರು ಕಾಣಿಸಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಮಧ್ಯಾಹ್ನದ ವೇಳೆ ಆರೋಗ್ಯ ಇನ್ನಷ್ಟು ವಿಷಮಿಸಿದ ಹಿನ್ನಲೆಯಲ್ಲಿ ಅವರನ್ನು ಆಂಬ್ಯುಲೆನ್ಸ್ ಸಹಾಯದಿಂದ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ.
ಮೂರು ದಶಕಕ್ಕೂ ಅಧಿಕ ಕಾಲದಿಂದ ಪತ್ರಿಕಾ ರಂಗದಲ್ಲಿ ವ್ಯವಸಾಯ ಮಾಡಿದ್ದ ರಂಜನ್ರವರು ಪತ್ರಿಕಾ ರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಪುತ್ತೂರಿನ ಅಗ್ರಗಣ್ಯ ಪತ್ರಕರ್ತ. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹತ್ತು ಹಲವು ಪುರಸ್ಕಾರ, ಪ್ರಶಸ್ತಿ ಸನ್ಮಾನಗಳು ಸಂದಿವೆ.
ಮೃತರ ನಿಧನಕ್ಕೆ ಕರ್ನಾಟಕ ರಾಜ್ಯ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು, ಮಂಜೇಶ್ವರ ಪ್ರೆಸ್ ಕ್ಲಬ್ ಗಾಢವಾದ ಸಂತಾಪ ಸೂಚಿಸಿದೆ.
