ಮಂಜೇಶ್ವರ:- ಸನಾತನ ಸಂಸ್ಕೃತಿ, ಸಂಸ್ಕಾರ ಭರಿತ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ಭವಿಷ್ಯತ್ ನಲ್ಲಿ ನೆಮ್ಮದಿ ಜೀವನ ಸಾಧ್ಯ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನಂನ ಸಾದ್ವಿ ಶ್ರೀ ಮಾತಾನಂದಮಯಿಯವರು ನುಡಿದರು.
ಅವರು ವರ್ಕಾಡಿ ಬಜಿಲಕರಿಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರಂಗಪಾಣಿ ಮಹಾವಿಷ್ಣು ದುರ್ಗಾ ಕ್ಷೇತ್ರದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಸಂಜೆ ನಡೆದ ತೃತೀಯ ದಿನದ "ಮಾತೆಯರ ಸಮಾವೇಶ"ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ, ಸಭಿಕರನ್ನುದ್ದೇಶಿಸಿ ಆಶೀರ್ವಚನವಿತ್ತರು.
ತುಳುನಾಡು ಸಂಸ್ಕಾರ ಸಂಸ್ಕೃತಿಯನ್ನು ದೈವ ದೇವರುಗಳನ್ನು ಆರಾಧಿಸುವ ಕೇಂದ್ರ. ಇಂತಹ ಪುರಾತನ ಸಂಸ್ಕಾರವನ್ನು ಶಿಕ್ಷಣದ ಜತೆಗೆ ಮನೆಯಲ್ಲಿ ಮಕ್ಕಳಿಗೆ ಕಲಿಸಬೇಕು. ಬಡತನದ ಮುಖೇನ ಬದುಕಿನ ಪಾಠ ತಿಳಿಯಬಹುದು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಲುಗಿ ಹೋಗಿರುವ ಈ ಕಾಲದಲ್ಲಿ ದೇಶೀಯ ಸಂಸ್ಕೃತಿಯನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲ್ಲು ಪ್ರತೀ ಮನೆಯ ತಾಯಂದಿರು ಮಕ್ಕಳಿಗೆ ಸಂಸ್ಕಾರದ ಅರಿವನ್ನು ನೀಡಿದ್ದಲ್ಲಿ ಮುಂದೆ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.
ವಿಜಯಬ್ಯಾಂಕ್ ನ ನಿವೃತ್ತ ಪ್ರಬಂಧಕರಾದ ಶ್ರೀಮತಿ ವಿಶಾಲಾಕ್ಷಿ ನಾಯ್ಕ್ ಮಂಗಳೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಜಯ ಬ್ಯಾಂಕ್ ನಿವೃತ್ತ ಪ್ರಭಂದಕಿ ಶ್ರೀಮತಿ ಸಂತೋಷಿ ಎಸ್. ನ್ಯಾಕ್ ಬಜಲಕರಿಯ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಕೆ. ಪಾವೂರು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆಯರಾದ ಶ್ರೀಮತಿ ಅಶ್ವಿನಿ ಎಂ.ಎಲ್ ಪಜ್ವ, ಶ್ರೀಮತಿ ಸರೋಜಾ ಆರ್. ಬಲ್ಲಾಳ್, ಕಳಿಯೂರು ಸೈನ್ಟ್ ಜೋಸೆಫ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪ ಶೆಟ್ಟಿ, ದೇಲಂಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪ್ರಮೀಳಾ ಸಿ. ನ್ಯಾಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಮಮತಾ ದಿವಾಕರ್ ಮಜೀರ್ಪಳ್ಳ, ಕೇರಳ ತುಳು ಅಕಾಡೆಮಿ ಸದಸ್ಯೆ ಶ್ರೀಮತಿ ಗೀತಾ ಸಾಮಾನಿ ಸುಳ್ಯಮೆ, ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾ ಭಾಸ್ಕರ್ ಪೊಯ್ಯೆ, ಶ್ರೀಮತಿ ಪದ್ಮಾವತಿ ಪೊಯ್ಯತ್ತಬೈಲ್, ಬಡಾಜೆ ಜಿ.ಎಲ್.ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಾವತಿ ಟೀಚರ್ ಐಲ, ಶ್ರೀಮತಿ ಸರೋಜಾ ನ್ಯಾಕ್ ಪಿಲಿಕಳ, ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಶ್ರೀಮತಿ ರಮ್ಯಾ ಶೆಟ್ಟಿ ಕುರ್ಮಾನ್ ಸ್ವಾಗತಿಸಿ, ಶ್ರೀಮತಿ ಆಶಾ ದಿಲೀಪ್ ಸುಳ್ಯಮೆ ಹಾಗೂ ಕುಮಾರಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ವೀತಾ ಹರಿಪ್ರಸಾದ್ ಪೂಂಜ ವಂದಿಸಿದರು.
ಬೆಳಗ್ಗೆ ಕ್ಷೇತ್ರದಲ್ಲಿ ಸ್ವಸಿ ವಾಚನ, ಮಹಾಗಣಯಾಗ, ಪ್ರಾಯಶ್ಚಿತ್ತ ಹೋಮ, ಚಂಡಿಕಾಯಾಗ, ಪರಿವಾರ ದೇವರಿಗೆ ಕಲಶಾಭಿಷೇಕ, ಬಳಿಕ ವಿವಿಧ ಭಜನಾ ಸಂಘಗಳಿಂದ "ಭಜನಾ ಸಂಕೀರ್ತನೆ" ಆಕಾಶವಾಣಿ ಕಲಾವಿದೆ ಶ್ರೀಮತಿ ಮಂಜುಳಾ ಜಿ.ರಾವ್ ಇರಾ ಇವರಿಂದ "ಶ್ರೀ ಕೃಷ್ಣ ಕಾರುಣ್ಯ" ಎಂಬ ಹರಿಕಥಾ ಪ್ರಸಂಗ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಅಪರಾಹ್ನ ಯಕ್ಷಕೂಟ ಮಹಿಳಾ ವೇದಿಕೆ ಮಂಗಲ್ಪಾಡಿ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಕ್ಷೇತ್ರದಲ್ಲಿ ದುರ್ಗಾಪೂಜೆ, ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೊಳಲು ಸಂಗೀತ ವಿದ್ಯಾಲಯ ಇರಾ - ಮುಡಿಪು ಇವರಿಂದ "ಸ್ವರಭೂಷಿತ ಭಕ್ತಿ ರಸಮಂಜರಿ" ನಡೆಯಲಿದೆ.
✍️ ರತನ್ ಕುಮಾರ್ ಹೊಸಂಗಡಿ.
📸 ದೀಪಕ್ ರಾಜ್ ಉಪ್ಪಳ.
