ಮಂಗಳೂರು : ಕುದ್ರೋಳಿ ದೇವಸ್ಥಾನಕ್ಕೆ ಬಂದು ಫುಟ್ಪಾತ್ನಲ್ಲಿ ನಡೆದುಕೊಂಡು ಹಿಂತೆರಳುತ್ತಿದ್ದ ನಾಲ್ವರು ಹುಡುಗಿಯರಿಗೆ ಯಮರೂಪಿಯಂತೆ ಬಂದ ಕಾರು ಢಿಕ್ಕಿಯಾಗಿದ್ದು, ಈ ಪೈಕಿ ಯುವತಿಯೊಬ್ಬಳು ಮೃತಪಟ್ಟ ಘಟನೆ ನಗರದ ಮಣ್ಣಗುಡ್ಡದಲ್ಲಿ ನಡೆದಿದೆ.
ಇಂದು ಸಂಜೆ 5.30ರ ವೇಳೆಗೆ ಘಟನೆ ನಡೆದಿದ್ದು ಸುರತ್ಕಲ್ ಕಾನ ಬಾಳ ನಿವಾಸಿ ರೂಪಶ್ರೀ (23) ಮೃತಪಟ್ಟವರು. ಇವರು ಇತರ ನಾಲ್ಕು ಹುಡುಗಿಯರ ಜೊತೆಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದಿದ್ದರು.
ಸಂಜೆ ದೇವಸ್ಥಾನ ಕಡೆಯಿಂದ ಲೇಡಿಹಿಲ್ ಕಡೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ನುಗ್ಗಿ ಬಂದ ಕಾರು ಡಿಕ್ಕಿಯಾಗಿದೆ. ಕಾರು ನೇರವಾಗಿ ರಸ್ತೆಯಿಂದ ಬಂದಿದ್ದು ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ಯುವತಿಯರ ಮೇಲೆರಗಿದೆ.
ಘಟನೆಯಲ್ಲಿ ಒಬ್ಬಳು ಯುವತಿ ಗಾಯಗೊಂಡು ಮೃತಪಟ್ಟಿದ್ದರೆ, ಇತರ ನಾಲ್ಕು ಮಂದಿಯೂ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ಚಾಲಕನ ನಿಯಂತ್ರಣ ಇಲ್ಲದ ರೀತಿ ಹುಡುಗಿಯರ ಮೇಲೆ ಹರಿದಿದ್ದು ಅಪಘಾತದ ದೃಶ್ಯ ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರು ನಾಲ್ಕು ಹುಡುಗಿಯರಿಗೆ ಡಿಕ್ಕಿಯಾದ ಬಳಿಕ ರಸ್ತೆ ದಾಟುತ್ತಿದ್ದ ಇನ್ನೊಬ್ಬ ಮಹಿಳೆಗೂ ಡಿಕ್ಕಿಯಾಗಿದೆ. ಗಾಯಗೊಂಡಿದ್ದ ಸ್ವಾತಿ(26), ಹಿತ್ನವಿ (16), ಕೃತಿಕಾ (16), ಯತಿಕಾ(12) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರು ಚಾಲಕ ಕಮಲೇಶ್ ಎಂಬಾತ ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ ಮಣ್ಣಗುಡ್ಡದ ಮನೆಗೆ ತೆರಳಿದ್ದ. ಮನೆಗೆ ಹೋಗಿ ತಂದೆ ಬಲದೇವ್ ಜೊತೆಗೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದ, ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಕೂಡಲೇ ಸ್ಥಳೀಯರು ಎಜೆ ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ Crime No. 56/2023 ರಂತೆ
U/s. 279, 337, 338, 304(A) IPC & Sec: 184 MV Act & Sec: 134(a) (b) R/w 187 MV Act. ನಡಿ ಪ್ರಕರಣ ದಾಖಲಾಗಿದೆ.


